Yuva Rajkumar; ‘ಎಕ್ಕ ಮಾರ್ ಮಾರ್ ಮಾರ್ …’ ಎಂದು ಹೆಜ್ಜೆ ಹಾಕಿದ ಯುವ ರಾಜಕುಮಾರ್

ಯುವ ರಾಜಕುಮಾರ್ (Yuva Rajkumar) ಅಭಿನಯದ ‘ಎಕ್ಕ’ ಚಿತ್ರದ ಮುಹೂರ್ತದ ದಿನದಂದೇ ಚಿತ್ರವನ್ನು 2025ರ ಜೂನ್ 06ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಚಿತ್ರ ಬಿಡುಗಡೆಗೆ, ಇನ್ನು ಕೇವಲ ಎರಡೂವರೆ ತಿಂಗಳುಗಳು ಮಾತ್ರ ಇದೆ. ಹೀಗಿರುವಾಗಲೇ, ‘ಯಕ್ಕ’ ಚಿತ್ರದ ಮೊದಲ ಹಾಡು ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.
‘ಜಾಕಿ’ ಚಿತ್ರದ ‘ಎಕ್ಕ ರಾಜ ರಾಣಿ ನನ್ನ ಕೈಯೊಳಗೆ …’ ಹಾಡನ್ನು ನೆನಪಿಸುವ ‘ಎಕ್ಕ ಮಾರ್ ಮಾರ್ ಮಾರ್ …’ ಹಾಡು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ನಾಗಾರ್ಜುನ ಶರ್ಮ ಬರೆದಿದ್ದು, ಚರಣ್ ರಾಜ್, ರೋಹಿತ್ ಪದಕಿ ಮತ್ತು ಮಹಾಲಿಂಗಮ್ ಹಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ‘ಬಾಬಾ’ ಭಾಸ್ಕರ್ ನೃತ್ಯ ಸಂಯೋಜನೆ ಮಾಡಿರುವ ಈ ಹಾಡಿಗೆ ಯುವ ರಾಜಕುಮಾರ್ ಹೆಜ್ಜೆ ಹಾಕಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವಗೆ ಸಂಜನಾ ಆನಂದ್ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಆದಿತ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿರುವ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳಾದ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.