ರಾಮಾಚಾರಿ ಬರ್ತ್‌ಡೇಗೆ ಟಾಕ್ಸಿಕ್‌ನಿಂದ ವಿಶೇಷ ಕೊಡುಗೆ..!

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂತರ ಮುಂಬೈನಲ್ಲಿ ಮುಂದುವರೆದಿದೆ. ಈ ಮಧ್ಯೆ, ಯಶ್ ತಮ್ಮ ಹುಟ್ಟುಹಬ್ಬವನ್ನು ಬುಧವಾರ (ಜನವರಿ 08) ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದಿಂದ ಒಂದು ಆಶ್ಚರ್ಯ ಕಾದಿದಿಯಂತೆ. ಹಾಗಂತ ಸ್ವತಃ ಯಶ್ ಘೋಷಿಸಿದ್ದಾರೆ.
ಇಂದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಅವರು, 08ರಂದು ಒಂದು ಆಶ್ಚರ್ಯ ಕಾದಿದೆ ಎಂದು ಹೇಳಿದ್ದಾರೆ. ಆದರೆ, ಆ ಆಶ್ಚರ್ಯವೇನು ಎಂಬುದನ್ನು ಅವರು ಬಹಿರಂಗಗೊಳಿಸಿಲ್ಲ. ‘Unleashing him’ ಎಂದಷ್ಟೇ ಬರೆದುಕೊಂಡಿದ್ದಾರೆ. ಸರಿಯಾಗಿ ಒಂದು ವರ್ಷದ ಹಿಂದೆ, ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಘೋಷಣೆಯಾಗಿತ್ತು. ಈ ಹುಟ್ಟುಹಬ್ಬಕ್ಕೆ ಮೊದಲ ನೋಟದ ಪೋಸ್ಟರ್ ಅಥವಾ ಟೀಸರ್ ಬಿಡುಗಡೆಯಾದರೆ ಆಶ್ಚರ್ಯವೇನಿಲ್ಲ. ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯೂ ಇದೆ. ಒಟ್ಟಾರೆ ಜನವರಿ ಎಂಟರ ಬುಧವಾರ ಬೆಳಿಗ್ಗೆ 10.25ಕ್ಕೆ ಏನೋ ಒಂದು ಆಶ್ಚರ್ಯ ಕಾದಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಗೀತೂ ಮೋಹನ್ ದಾಸ್ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದರೆ, ಕೆ.ವಿ.ಎನ್. ಪ್ರೊಡಕ್ಷನ್ಸ್ ಮತ್ತು ಮಾನ್‍ಸ್ಟರ್ ಮೈಂಡ್ ಕ್ರಿಯೇಷಣ್ಸ್ ಬ್ಯಾನರ್ ಅಡಿ ಕೋನ ವೆಂಕಟ್‍ನಾರಾಯಣ್ ಮತ್ತು ಯಶ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್, ಅನಿಲ್ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಒಂದು ವಾರದ ಮುಂಚೆಯೇ ಹೇಳಿದ್ದಾರೆ. ಈ ಬಾರಿ ತಾವು ಊರಿನಲ್ಲಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.