‘Yash ತಾಯಿ ಅನ್ನೋಕ್ಕಿಂತ ಡ್ರೈವರ್ ಹೆಂಡತಿ ಅಂತ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ …’

kotthalavaadi

ಯಶ್ (Yash) ತಾಯಿ ಪುಷ್ಪಾ ಅರುಣ್ ‍ಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’, ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಶ್ ತಾಯಿ ನಿರ್ಮಿಸುತ್ತಿರುವ ಚಿತ್ರವಾದ್ದರಿಂದ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲ, ನಿರೀಕ್ಷೆ ಇದೆ. ಈಗಾಗಲೇ ಪುಷ್ಪಾ ಅವರು ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಈಗ ಚಿತ್ರದ ಬಿಡುಗಡೆಗೂ ಮೊದಲು ಇನ್ನೊಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ಒಬ್ಬ ಡ್ರೈವರ್ ಹೆಂಡತಿಯಾಗಿ ಒಂದು ಚಿತ್ರ ನಿರ್ಮಾಣ ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕೆ ಹೆಚ್ಚು ಖುಷಿ ಇದೆ ಎನ್ನುತ್ತಾರೆ ಪುಷ್ಪಾ. ಈ ಕುರಿತು ಮಾತನಾಡಿರುವ ಅವರು, ‘ಈಗಾಗಲೇ ಎಲ್ಲರೂ ನನ್ನನ್ನು ಯಶ್‍ ಅಮ್ಮ ಎಂದು ಗುರುತಿಸಿದ್ದಾರೆ. ನನಗೆ ಯಶ್‍ ಅಮ್ಮ ಎಂದು ಗುರುತಿಸಿಕೊಳ್ಳೋದು ಖುಷಿಯ ವಿಚಾರವೇ. ಆದರೆ, ನನ್ನ ಕೆಲಸದಿಂದ ಗುರುತಿಸಿಕೊಳ್ಳುವ ಆಸೆ ನನಗೆ. ತಾಯಿಯಾಗಿ ನನ್ನ ಮಗ ಹೆಸರು ಮಾಡಿದ್ದಾನೆ, ಅವನಿಂದ ನನಗೆ ಒಳ್ಳೆಯ ಹೆಸರಿದೆ. ಅದು ಬೇರೆ. ನಾನು, ನನ್ನ ಯಜಮಾನರು ಸೇರಿ ಮಾಡುತ್ತಿರುವ ಕೆಲಸದಿಂದ ಗುರುತಿಸಿಕೊಳ್ಳಬೇಕೆಂಬ ಆಸೆ. ಒಬ್ಬ ಡ್ರೈವರ್ ಹೆಂಡತಿಯಾಗಿ ಒಂದು ಚಿತ್ರ ನಿರ್ಮಾಣ ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕೆ ಹೆಚ್ಚು ಖುಷಿ ಇದೆ’ ಎನ್ನುತ್ತಾರೆ.

ತನ್ನ ಅಭಿರುಚಿಗೆ ತಕ್ಕ ಹಾಗೆ ಈ ಚಿತ್ರ ಮೂಡಿಬಂದಿದೆ ಎನ್ನುವ ಅವರು, ‘ನನಗೆ ಹೊಸಬರ ಜೊತೆಗೆ ಕೆಲಸ ಮಾಡುವಾಸೆ. ಹಾಗಿರುವಾಗ ನನ್ನದೇ ದುಡ್ಡಿನಲ್ಲಿ ಚಿತ್ರಗಳನ್ನು ಮಾಡಬೇಕು. ಸುಮ್ಮನೆ ಹೊಸಬರಿಗೆ ಪ್ರೋತ್ಸಾಹ ಕೊಡುವುದಲ್ಲ. ಪ್ರತಿಭಾವಂತರಿಗೆ ಪ್ರೋತ್ಸಾಹ ಕೊಡುವುದು ಮುಖ್ಯ. ಇವತ್ತು ದೇವರು ಒಂದು ಚಿತ್ರ ಮಾಡು ಶಕ್ತಿ ಕೊಟ್ಟಿದ್ದಾರೆ. ಹಾಗಾಗಿ, ಯಾಕೆ ಮಾಡಬಾರದು ಎಂದು ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದೇವೆ. ಬರೀ ಸಿನಿಮಾ ಅಷ್ಟೇ ಅಲ್ಲ, ಕೃಷಿಯಲ್ಲೂ ನಾನು ತೊಡಗಿಸಿಕೊಂಡಿದ್ದೇನೆ. ಕಾಡನ್ನು ನಾಡು ಮಾಡಿದ್ದೇನೆ. ನೀವು ಬಂದ ಮೇಲೆ ಈ ಪ್ರದೇಶಕ್ಕೆ ಕಳೆ ಬಂತು ಎಂದು ಬಹಳಷ್ಟು ಜನ ಹೇಳಿದ್ದಾರೆ. ಯಶ್‍ ಸಹ ಸಾಕಷ್ಟು ಖರ್ಚು ಮಾಡಿದ್ದಾನೆ. ಕೇಳಿದ್ದನ್ನೆಲ್ಲಾ ಕೊಡಿಸಿದ್ದಾನೆ. ಕೊಡಿಸೋದು ಬೇರೆ. ಆ ಕಾಡಿನಲ್ಲಿದ್ದು ಕೆಲಸ ಮಾಡುವುದು ಸುಲಭದ ಮಾತಲ್ಲ’ ಎನ್ನುತ್ತಾರೆ.

ತಮಗೆ ಸರಳವಾಗಿರಬೇಕು ಎಂಬಾಸೆ ಎನ್ನುವ ಪುಷ್ಪಾ, ‘ಯಶ್‍ ನನಗೆ ಕಾಸ್ಟ್ಲಿ ಕಾರ್ ಕೊಡಿಸಿದ್ದ. ನನಗೆ ಬೇಡ, ವಾಪಸ್ಸು ತೆಗೆದುಕೊಂಡು ಹೋಗು ಎಂದು ವಾಪಸ್ಸು ಕಳುಹಿಸಿದೆ. ಅದರಿಂದ ಇಳಿದರೆ ನನ್ನನ್ನೇ ನೋಡುತ್ತಾರೆ. ನನ್ನನ್ನು ಶೋಆಫ್‍ ಎಂದುಕೊಳ್ಳುತ್ತಾರೆ. ಹಾಗಾಗಿ, ಬೇಡ ಎಂದೆ. ನನಗೆ ಸರಳವಾಗಿರುವಾಸೆ. ನಾನು ತುಂಬಾ ಚೆನ್ನಾಗಿದ್ದೇನೆ ಮತ್ತು ಖುಷಿಯಾಗಿದ್ದೇನೆ. ಆದರೆ, ಬೇರೆ ಏನಾದರೂ ಮಾಡಬೇಕು ಎಂಬ ಆಸೆ ಇದೆ. ಸಿನಿಮಾದಲ್ಲೇ ಸಾಕಷ್ಟು ಸಾಧಿಸುವುದಿದೆ. ಇಲ್ಲಿ ಏನು ಬೇಕಾದರೂ ಮಾಡಬಹುದು. ಹಾಗಂತ ತುಂಬಾ ದುಡ್ಡಿದೆ ಎಂದರ್ಥವಲ್ಲ. ಒಂದೊಂದೇ ಮೆಟ್ಟಿಲು ಹತ್ತಬೇಕು ಎಂಬುದು ಆಸೆ. ಮೊದಲು ನಾವು ಕೆಲಸ ಮಾಡಿ ತೋರಿಸಬೇಕು. 15 ಮೆಟ್ಟಿಲು ಹತ್ತಿ ಆ ನಂತರ ಹತ್ತಿದ್ದೇನೆ ಎಂದು ಹೇಳಬೇಕು’ ಎಂಬುದು ಅವರ ಅಭಿಪ್ರಾಯ.

ತಮ್ಮ ಗುರಿ ದೊಡ್ಡದಿದೆ ಎನ್ನುವ ಅವರು, ‘ಈಗಲೇ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ಹೇಳುವುದಕ್ಕೆ ನನಗೆ ಇಷ್ಟವಿಲ್ಲ. ಮೊದಲು ಕೆಲಸ ಮಾಡೋಣ. ಸದ್ಯ ಒಂದು ಚಿತ್ರ ಮಾಡಿದ್ದೇವೆ. ಇದನ್ನು ಜನರಿಗೆ ಸರಿಯಾಗಿ ಮುಟ್ಟಿಸಬೇಕು. ಗೆಲ್ಲಿಸುವುದು, ಸೋಲಿಸುವುದು ಅವರಿಗೆ ಬಿಟ್ಟಿದ್ದು’ ಎಂದು ಹೇಳುತ್ತಾರೆ.

‘ಕೊತ್ತಲವಾಡಿ’ ಚಿತ್ರಕ್ಕೆ ಶ್ರೀರಾಜ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಚಿತ್ರದಲ್ಲಿ ಪೃಥ್ವಿ ಅಂಬಾರ್, ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ಮಾನಸೀ ಸುಧೀರ್ ಮುಂತಾದವರು ನಟಿಸಿದ್ದಾರೆ.


ಇದನ್ನೂ ಓದಿ :-



ಹೆಚ್ಚಿನ ಓದಿಗಾಗಿ :-


Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!