World Kannada Cinema Day; ವಿಶ್ವ ಕನ್ನಡ ಸಿನಿಮಾ ದಿನ: ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣದ ಕಥನ ಇದು

World-Kannada-Cinema-Day

ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣವಾಗಿದ್ದು 1934ರಲ್ಲಿ. ಇದು ಕನ್ನಡದ ಮೊದಲ ಸಿನಿಮಾ ಹಾಗೇ ಮೊದಲ ವಾಕ್ ಸಿನಿಮಾ ಕೂಡಾ. 1934ರ ಮಾರ್ಚ್ 3 ರಂದು ‘ಸತಿ ಸುಲೋಚನ’ ತೆರೆಕಾಣುತ್ತದೆ. ಭಾರತದ ಮೊದಲ ಸಿನಿಮಾ 1913ರಲ್ಲಿಯೇ ನಿರ್ಮಾಣವಾಯಿಗಿತ್ತು. ಆದರೆ ಕನ್ನಡದಲ್ಲಿ ಮೊದಲ ಸಿನಿಮಾ ಆಗಬೇಕಾದರೆ ಹೆಚ್ಚು ಕಮ್ಮಿ 20 ವರ್ಷಗಳೇ ಬೇಕಾಯಿತು. (World Kannada Cinema Day)

ಆದರೆ ಇಲ್ಲಿ ಇನ್ನೋಂದು ಅಚ್ಚರಿ ಎಂದರೆ ಸತಿ ಸುಲೋಚನಕ್ಕಿಂತ ಮೊದಲೇ ಕನ್ನಡದ ಟಾಕಿ ಚಿತ್ರವೊಂದು ತಯಾರಾಗಿತ್ತು. ಅದೇ ‘ಭಕ್ತ ಧೃವ’ ಎಂಬ ಕನ್ನಡದ್ದೇ ಸಿನಿಮ. ಭಕ್ತ ಧೃವ ಸೆಟ್ಟೇರಿತ್ತು ಮತ್ತು ಪೂರ್ಣ ಸಹ ಆಯಿತು. ‘ಸತಿ ಸುಲೋಚನಾ’ ಸಿನಿಮಾಕ್ಕೆ ಮುನ್ನವೇ ಸೆನ್ಸಾರ್ ಕೂಡಾ ಆಗಿತ್ತು. ಆದರೆ, ತಡವಾಗಿ ತೆರೆಗೆ ಬಂದಿದ್ದರಿಂದ ಸತಿ ಸುಲೋಚನಾ ಚಿತ್ರ ಕನ್ನಡದ ಮೊದಲ ಚಿತ್ರವಾಗಿ ಹೊರಹೊಮ್ಮಿತು.

‘ಆಲಂ ಆರ’ ಎಂಬ ಭಾರತದ ಮೊದಲ ಟಾಕಿ ಸಿನಿಮಾ ಬಂದ ಮೇಲೆ ಚಿತ್ರೋದ್ಯಮ ಕ್ಷೇತ್ರದಲ್ಲಿ ಸಂಚಲನವೇ ಮೂಡಿತು. ಆವರೆಗೆ ಮೂಕಿ ಸಿನಿಮಾಗಳನ್ನು ಮಾಡುತ್ತಿದ್ದ ತಮಿಳು, ತೆಲುಗು, ಮಲಯಾಳಂ ಸಿನಿಮಾ ಉದ್ಯಮಗಳು ಟಾಕಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸಿದವು. ಅಸ್ಸಾಂನಲ್ಲೂ ಮೊದಲ ಸಿನಿಮಾ ಸಹ ನಿರ್ಮಾಣವಾಯಿತು. ಆದರೆ ಕನ್ನಡದಲ್ಲಿ ಯಾವ ಸಿನಿಮಾ ಸಹ ನಿರ್ಮಾಣ ಆಗಿರಲಿಲ್ಲ.

ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಉದ್ಯಮಿ ಚಮನ್‌ಲಾಲ್ ಡೂಂಗಾಂಜಿ ಎಂಬುವರು 1932ರಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ಸಿನಿಮಾ ನಿರ್ಮಾಣ ಮಾಡಲು ಉತ್ಸುಕರಾಗಿದ್ದರು. ರಾಮಾಯಣದ ಕತೆಯೊಂದನ್ನು ಸಿನಿಮಾ ಆಗಿಸುವುದು ಅವರ ಆಸೆಯಾಗಿತ್ತು. ಅದಾಗಲೇ ತೆಲುಗಿನಲ್ಲಿ ಮೂಕಿ ಸಿನಿಮಾ ನಿರ್ದೇಶನ ಮಾಡಿದ್ದ ಯರ್ರಗುಡಿಪಾಟಿ ವರದ ರಾವ್ ಅವರಿಗೆ ಜವಾಬ್ದಾರಿ ವಹಿಸಲಾಯಿತು.

ಅದಾಗಲೇ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಎಂ ವಿ ಸುಬ್ಬಯ್ಯ ನಾಯ್ಡು ಎಂದೇ ಖ್ಯಾತರಾಗಿದ್ದ ಮೈಸೂರು ವೆಂಕಟಪ್ಪ ಸುಬ್ಬಯ್ಯ ನಾಯ್ಡು ಅವರನ್ನು ಪಾತ್ರಕ್ಕಾಗಿ ಕೇಳಿದಾಗ ತಮ್ಮ ಜೊತೆಯೇ ನಟಿಸುತ್ತಿದ್ದ ನಾಗೇಂದ್ರ ರಾವ್‌ ಅವರಿಗೆ ಪಾತ್ರ ನೀಡುವುದಾದರೆ ಮಾತ್ರವೇ ಸಿನಿಮಾದಲ್ಲಿ ನಟಿಸುವುದಾಗಿ ಷರತ್ತು ಹಾಕಿದರು. ಷರತ್ತಿಗೆ ನಿರ್ದೆಶಕ, ನಿರ್ಮಾಪಕರು ಒಪ್ಪಿಕೊಂಡರು.

‘ಇಂದ್ರಜಿತ ವಧೆ’ ನಾಟಕವನ್ನು ಸಿನಿಮಾ ಮಾಡಲು ತಂಡವು ನಿಶ್ಚಯಿಸಿ ಗುಬ್ಬಿ ವೀರಣ್ಣನವರಿಗೆ ನಾಟಕಗಳನ್ನು ಬರೆದಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳನ್ನು ಸಂಪರ್ಕಿಸಿ ಚಿತ್ರಕತೆ ಬರೆದುಕೊಡುವಂತೆ ಕೇಳಿದರು ಅಂತೆಯೇ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಸಿನಿಮಾಕ್ಕೆ ಒಪ್ಪುವಂತೆ ಚಿತ್ರಕತೆ ಬರೆದುದು ಮಾತ್ರವೇ ಅಲ್ಲದೆ 16 ಹಾಡುಗಳನ್ನು ಸಿನಿಮಾಕ್ಕಾಗಿ ಬರೆದುಕೊಟ್ಟರು. ನಂತರ ಇಂದ್ರಜಿತನ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು, ಸುಲೋಚನಾ ಪಾತ್ರಕ್ಕೆ ತ್ರಿಪುರಾಂಭ, ರಾವಣನ ಪಾತ್ರದಲ್ಲಿ ನಾಗೇಂದ್ರ ರಾವ್, ಮಂಡೋದರಿ ಪಾತ್ರಕ್ಕೆ ಲಕ್ಷ್ಮಿ, ಲಕ್ಷ್ಮಣನ ಪಾತ್ರಕ್ಕೆ ನಿರ್ದೇಶಕರೂ ಆಗಿದ್ದ ವೈ.ವಿ.ರಾವ್ ಹೀಗೆ ಪಾತ್ರಗಳ ಆಯ್ಕೆಯಾಗಿ ಸಿನಿಮಾ ಚಿತ್ರೀಕರಣಕ್ಕೆ ಮುನ್ನ ತಾಲೀಮು ಸಹ ಆರಂಭವಾಯಿತು.

1933 ಕೊಲ್ಹಾಪುರಕ್ಕೆ ತೆರಳಿ ಅಲ್ಲಿನ ‘ಛತ್ರಪತಿ ಸಿನಿಟೋನ್’ ಹೆಸರಿನ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಿತು. ಚಿತ್ರದ ಬಹುತೇಕ ಚಿತ್ರೀಕರಣ ನೈಸರ್ಗಿಕ ಲೈಟ್‌ನಲ್ಲಿಯೇ ಮಾಡಲಾಯಿತು. ಈ ನಡುವೆ ಸಿನಿಮಾದ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ಕೊಟ್ಟಿಲ್ಲವೆಂದು ಸುಬ್ಬಯ್ಯ ನಾಯ್ಡು ಸೇರಿದಂತೆ ಇತರೆ ಕಲಾವಿದರು ಪ್ರತಿಭಟನೆ ಸಹ ಮಾಡಿದ್ದರು. ಸಿನಿಮಾ ಮುಗಿಯುವ ವೇಳೆಗೆ 40,000 ವೆಚ್ಚವಾಗಿತ್ತು.

ಮಾರ್ಚ್ 03, 1934ರಂದು ಕೆ.ಆರ್.ಪೇಟೆ ಬಳಿಕ ಪ್ಯಾರಾಮೌಂಟ್ ಹಾಲ್‌ನಲ್ಲಿ ಸಿನಿಮಾವು ಬಿಡುಗಡೆ ಆಯಿತು. ಪ್ಯಾರಾಮೌಂಟ್ ಕರ್ನಾಟಕದ ಮೊದಲ ಚಿತ್ರಮಂದಿರ ಸಹ ಹೌದು. ಸುಮಾರು ಎಂಟು ವಾರ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ‘ಸತಿ ಸುಲೋಚನಾ’ ಸಿನಿಮಾ ಓಡಿತ್ತು.

One thought on “World Kannada Cinema Day; ವಿಶ್ವ ಕನ್ನಡ ಸಿನಿಮಾ ದಿನ: ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣದ ಕಥನ ಇದು

Leave a Reply

Your email address will not be published. Required fields are marked *