Vinay Rajkumar ; ನಿರ್ದೇಶಕರಾದ ವಿನಯ್‍ ರಾಜಕುಮಾರ್; ಮಾರ್ಚ್‍ನಲ್ಲಿ ‘ಅಂದೊಂದಿತ್ತು ಕಾಲ‘

andondittu-kaala-Vinay-Rajkumar

ನಟರಾಗಿದ್ದ ವಿನಯ್‍ ರಾಜ್‌ಕುಮಾರ್ (Vinay Rajkumar) ಇದೀಗ ನಿರ್ದೇಶಕರಾಗಿದ್ದಾರೆ. ಹಾಗಂತ ರಿಯಲ್‍ ಲೈಫ್‍ನಲ್ಲಿ ಅಲ್ಲ, ಚಿತ್ರವೊಂದರಲ್ಲಿ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ಅದೇ ‘ಅಂದೊಂದಿತ್ತು ಕಾಲ’. ಕೀರ್ತಿ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

‘ಅಂದೊಂದಿತ್ತು ಕಾಲ’ (Andondittu Kaala) ಚಿತ್ರದ ‘ಮುಂಗಾರು ಮಳೆಯಲ್ಲಿ …’ (Mungaru Maleyalli) ಎಂಬ ಹಾಡು ಕೆಲವು ದಿನಗಳ ಹಿಂದೆ ಗಣೇಶ್ (Ganesh) ಮತ್ತು ಪೂಜಾ ಗಾಂಧಿ (Pooja Gandhi) ಬಿಡುಗಡೆ ಮಾಡಿದ್ದರು. ಎ2 ಮ್ಯೂಸಿಕ್‍ ಚಾನಲ್‍ನಲ್ಲಿ ಲಭ್ಯವಿರುವ ಈ ಹಾಡು 1.6 ಮಿಲಿಯನ್‍ ವೀಕ್ಷಣೆ ಪಡೆಯುವುದರ ಜೊತೆಗೆ ಜನರಿಂದ ಮೆಚ್ಚುಗೆ ಪಡೆದಿದೆ. ಈ ಹಾಡು ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿತ್ರತಂಡದವರು ಇತ್ತೀಚೆಗೆ ಮಾಧ್ಯಮದವರ ಮುಂದೆ ಬಂದು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ್‍ ರಾಜಕುಮಾರ್, ‘ಈ ಚಿತ್ರದಲ್ಲಿ ನಾನು ಮೊದಲ ಬಾರಿಗೆ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದೇನೆ. ಇದೊಬ್ಬ ನಿರ್ದೇಶಕನ ಜೀವನದ ಕಥೆ. ನಮ್ಮ ಚಿತ್ರದ ನಿರ್ದೇಶಕ ಕೀರ್ತಿ ಅವರು ಜೀವನದಲ್ಲಿ ಅನುಭವಿಸಿದ ಘಟನೆಗಳು, ಅವರ ಸ್ನೇಹಿತರ ಅನುಭವಗಳನ್ನು ಸೇರಿಸಿ ಒಂದೊಳ್ಳೆಯ ಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದರು.

‘ಅಂದೊಂದಿತ್ತು ಕಾಲ’ದಲ್ಲಿ ವಿನಯ್‍ಗೆ ನಾಯಕಿಯಾಗಿ ನಟಿಸಿರುವವರು ಅದಿತಿ ಪ್ರಭುದೇವ (Aditi Prabhudeva), ‘ಈ ಚಿತ್ರದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್‍ ಅವರ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದರು.

ನಂತರ ಮಾತನಾಡಿದ ಸಂಗೀತ ನಿರ್ದೇಶಕ ರಾಘವೇಂದ್ರ, ‘ಈ ಹಾಡು ಪ್ರತೀ ದಿನ ಯೂಟ್ಯೂಬ್‍ನಲ್ಲಿ ಒಂದೂವರೆ ಲಕ್ಷ ವೀಕ್ಷಣೆ ಕಾಣುತ್ತಿದೆ. ಪ್ರತಿ ದಿನ 300 ರೀಲ್‍ಗಳಾಗುತ್ತಿದೆ. ನಾವೇನೇ ಸಂಗೀತ ಸಂಯೋಜಿಸಿದರೂ, ಅದನ್ನು ತೆರೆಯ ಮೇಲೆ ಚೆನ್ನಾಗಿ ತರುವುದು ಬಹಳ ಮುಖ್ಯ. ವಿನಯ್‍ ಮತ್ತು ಅದಿತಿ ಅವರ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿದ್ದು, ಅವರಿಬ್ಬರ ಅಭಿಮಾನಿಯಾಗಿದ್ದೇನೆ’ ಎಂದರು.

‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ವಿನಯ್‍ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್‍ ಮುಂತಾದವರು ನಟಿಸಿದ್ದು, ರವಿಚಂದ್ರನ್‍ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಭುವನ್‍ ಸಿನಿಮಾಸ್‍ ಅಡಿ ಸುರೇಶ್‍ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಭಿಷೇಕ್‍ ಕಾಸರಗೋಡು ಛಾಯಾಗ್ರಹಣವಿದೆ.

Andondittu Kaala, Vinay Rajkumar

(Andondittu Kaala, starring Vinay Rajkumar and Aditi Prabhudeva. ‘Mungaru Maleyalli’ song Released by Ganesh and Pooja Gandhi.)

Leave a Reply

Your email address will not be published. Required fields are marked *