ತಂದೆ-ಮಗನಾದ ವಿಜಯ್ ರಾಘವೇಂದ್ರ; ‘ರುದ್ರಾಭಿಷೇಕಂ’ನಲ್ಲಿ ವೀರಗಾಸೆ ಕಲಾವಿದ

ವಿಜಯ್ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಯಾವೊಂದು ಚಿತ್ರದಲ್ಲೂ ಅವರು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ‘ರುದ್ರಾಭಿಷೇಕಂ’ ಎಂಬ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ
ಕೆಲವು ದಿನಗಳ ಹಿಂದೆ ಪ್ರಾರಂಭವಾದ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ತಂದೆ-ಮಗನಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆ, ಇತಿಹಾಸ, ಅದರ ವೈಭವವನ್ನು ಕಮರ್ಷಿಯಲ್ ಶೈಲಿಯಲ್ಲಿ ಹೇಳುವುದಕ್ಕೆ ನಿರ್ದೇಶಕ ವಸಂತ್ ಕುಮಾರ್, ‘ರುದ್ರಾಭಿಷೇಕಂ’ ಚಿತ್ರದ ಮೂಲಕ ಪ್ರಯತ್ನಿಸಿದ್ದಾರೆ. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ವೀರಗಾಸೆ ಕಲೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.ಈ ಕಥೆಯ ಮೂಲ ವೀರಭದ್ರ ದೇವರು. ಆತನ ಕುರಿತಾಗಿ ‘ರುದ್ರಾಭಿಷೇಕಂ’ ಚಿತ್ರದಲ್ಲಿ ಹೇಳಲಾಗಿದೆ.
ಈಗಾಗಲೇ ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ ಎರಡನೇ ವಾರದಿಂದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲಾಗುವುದು. ಈ ಹಂತದಲ್ಲಿ ಮಾತಿನ ಭಾಗ ಹಾಗೂ ಎರಡು ಹಾಡುಗಳನ್ನು ದೇವನಹಳ್ಳಿ, ವಿಜಯಪುರದಲ್ಲಿ ಚಿತ್ರೀಕರಿಸಿ, ಉಳಿದೆರಡು ಹಾಡುಗಳನ್ನು ಮಲ್ಪೆ, ಮಂಗಳೂರು ಹಾಗೂ ಆಗುಂಬೆ ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ.
‘ರುದ್ರಾಭಿಷೇಕಂ’ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ರಂಗಾಯಣ ರಘು, ಬಲ ರಾಜವಾಡಿ, ವಸಂತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀ, ಮುತ್ತುರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಸಂಸ್ಥೆಯ ಮೂಲಕ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್ ಮುಂತಾದವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
