Vijay Rargavendra in Rudrabhishekam; ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ವಿಜಯ ರಾಘವೇಂದ್ರ

ಕರ್ನಾಟಕದ ಜನಪ್ರಿಯ ಜಾನಪದ ಕಲೆಗಳಲ್ಲಿ ವೀರಗಾಸೆ (Veeragase) ಸಹ ಒಂದು. ವೀರಗಾಸೆ ಕಲೆ ಹಾಗೂ ಅದರ ಅಧಿದೇವರಾದ ವೀರಭದ್ರ (veerabhadra) ದೇವರ ಇತಿಹಾಸವನ್ನು ಹೇಳುವ ‘ರುದ್ರಾಭಿಷೇಕಂ’(Rudrabhishekam) ಎಂಬ ಚಿತ್ರ ತಯಾರಾಗುತ್ತಿದ್ದು, ವೀರಗಾಸೆ ಗೆಟಪ್‍ನಲ್ಲಿ ವಿಜಯ್‍ ರಾಘವೇಂದ್ರ (Vijaya Rargavendra) ಕಾಣಿಸಿಕೊಂಡಿದ್ದಾರೆ.

ವೀರಗಾಸೆ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಆ ಕಲೆಯ ಮೂಲ, ಆ ಕಲಾವಿದರ ಇತಿಹಾಸವನ್ನು ಕಮರ್ಷಿಯಲ್ ಕಥೆಯ ಮೂಲಕ ಹೇಳುವ ಪ್ರಯತ್ನವೇ ‘ರುದ್ರಾಭಿಷೇಕಂ’. ವಸಂತ್‍ ಕುಮಾರ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ (Shri Ranganatha Swamy Temple) ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಹಾಗೂ ದೇವನಹಳ್ಳಿಯ ಚಿಕ್ಕತದಮಂಗಲ ಗ್ರಾಮದಲ್ಲಿ ಸೆಟ್ ಹಾಕಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ವೀರಗಾಸೆ ಕಲಾವಿದರನ್ನಿಟ್ಟುಕೊಂಡು ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಈ ಹಾಡಿನಲ್ಲಿ ಖುದ್ದು ವಿಜಯ್‍ ರಾಘವೇಂದ್ರ ಅವರು ವೀರಗಾಸೆಯ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. (Rudrabhishekam climax shooting)

ಈ ಹಾಡಿನ ಕುರಿತು ಮಾತನಾಡುವ ವಸಂತ್‍ ಕುಮಾರ್, ‘ಕಳೆದ 45 ದಿನಗಳಿಂದ ನಿರಂತರವಾಗಿ ಚಿತ್ರೀಕರಣ ನಡೆದಿದ್ದು, ಚಿತ್ರೀಕರಣದ ಜೊತೆಜೊತೆಗೆ ಎಡಿಟಿಂಗ್ ಕೂಡ ನಡೆಯುತ್ತಿದೆ. ಚಿತ್ರದ ಹೈಲೈಟ್‍ ಎಂದರೆ ಕ್ಲೈಮ್ಯಾಕ್ಸ್ ಹಾಡು. ನೂರಾರು ಜನ ವೀರಗಾಸೆ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಇನ್ನು ಮುಂದೆ ವೀರಗಾಸೆ ಕಲಾವಿದರು ಎಲ್ಲೇ ನೃತ್ಯ ಮಾಡಿರೂ ಈ ಹಾಡನ್ನಿಟ್ಟುಕೊಂಡು ವೀರಗಾಸೆ ಕುಣಿತ ನಡೆಸಬೇಕು ಎನ್ನುವಷ್ಟರ ಮಟ್ಟಿಗೆ ಹಾಡು ಚೆನ್ನಾಗಿ ಬಂದಿದೆ’ ಎಂದರು.

ದೈವದ ಹಿನ್ನೆಲೆ ಇರುವ ಈ ಜನಪದ ಕಲೆಯನ್ನು ನಾಡಿನ ಮನೆ ಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ ಎನ್ನುವ ನಿರ್ದೇಶಕರು, ‘ವಿಜಯ್‍ ರಾಘವೇಂದ್ರ ಚಿತ್ರದಲ್ಲಿ ಅಪ್ಪ- ಮಗನಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾನು ನಟಿಸಿದ್ದೇನೆ. ತಂದೆ, ಮಗ ಎರಡೂ ಜೂನ್ ಅಥವಾ ಜುಲೈ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ.

‘ರುದ್ರಾಭಿಷೇಕಂ’ ಚಿತ್ರವನ್ನು ಫ್ಯಾನ್‍ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್‌ ಅಡಿ ಮಂಜುನಾಥ ಕೆ.ಎನ್, ಜಯರಾಮ್ ರೆಡ್ಡಿ, ಕೆ.ವೆಂಕಟೇಶ್, ಚಿದಾನಂದ ಮೂರ್ತಿ ಮುಂತಾದವರು ನಿರ್ಮಿಸುತ್ತಿದ್ದು, ವಿಜಯ್‍ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್‍, ಬಲ ರಾಜವಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *