Bebo; ಒಂದು ‘ತೂಕ’ದ ಕಥೆ; ಈ ‘ಬೇಬೋ’, ಕರೀನಾ ಅಲ್ಲ …

Vidya Vijays film Bebo

‘ಬೇಬೋ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಮೊದಲಿಗೆ ನೆನಪಿಗೆ ಬರುವುದು ಬಾಲಿವುಡ್‍ ನಟಿ ಕರೀನಾ ಕಪೂರ್‌. ಆಕೆಗೆ ಇಂಥದ್ದೊಂದು ಅಡ್ಡಹೆಸರಿದ್ದು, ಕರೀನಾ ಅವರನ್ನು ಅವರ ಆಪ್ತರು ಅದೇ ಹೆಸರಿನಲ್ಲಿ ಕರೆಯುತ್ತಾರೆ. ಈಗ ಕನ್ನಡದಲ್ಲಿ ‘ಬೇಬೋ’ ಎಂಬ ಹೆಸರು ಸದ್ದಿಲ್ಲದೆ ಶುರುವಾಗಿದ್ದು, ಈ ಚಿತ್ರಕ್ಕೆ ಕರೀನಾ ಕಪೂರ್‌ ಅವರೇ ಸ್ಫೂರ್ತಿಯಾಗಿದ್ದು, ‘ಆದ್ರೆ ಇವ್ಳು ಕರೀನಾ ಅಲ್ಲ’ ಎಂಬ ಅಡಿಬರಹವೂ ಇದೆ.

ಈ ಹಿಂದೆ ‘ಯುದ್ಧ ಮತ್ತು ಸ್ವಾತಂತ್ರ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ, ಈಗ ‘ಬೇಬೋ’ ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತವಾಗಿದೆ. ಈ ಚಿತ್ರವನ್ನು ಜಯಹರಿ ಪ್ರಸಾದ್‍ ನಿರ್ದೇಶನ ಮಾಡುತ್ತಿದ್ದು, ವಿ.ಕೆ. ಕಂಬೈನ್ಸ್ ಬ್ಯಾನರ್‌ ಅಡಿ ಸಂತೋಷ್ ವಿಜಯ್‍ ಮತ್ತು ಸುಪ್ರೀತ್‍ ವಿಜಯ್‍ ನಿರ್ಮಾಣ ಮಾಡುತ್ತಿದ್ದಾರೆ.

ಇಲ್ಲಿ ಚಿತ್ರದ ನಾಯಕಿ, ಪುನೀತ್‍ ರಾಜಕುಮಾರ್‌ ಮತ್ತು ಬಾಲಿವುಡ್‍ ನಟಿ ಕರೀನಾ ಕಪೂರ್‌ ಅವರ ದೊಡ್ಡ ಅಭಿಮಾನಿಯಂತೆ. ‘ಇಲ್ಲಿ ನಾಯಕಿಯ ಹೆಸರು ಮಹಾಲಕ್ಷ್ಮೀ. ಆಕೆಗೆ ಕರೀನಾ ಕಪೂರ್‌ ಎಂದರೆ ಬಹಳ ಇಷ್ಟ. ಅವರಂತೆ ಜೀವನದಲ್ಲಿ ಆಗಬೇಕು ಎಂದು ಕನಸು ಕಾಣುತ್ತಿರುತ್ತಾಳೆ. ಹಾಗಾಗಿ, ಆಕೆಯ ಗೆಳತಿಯರು ಆಕೆಯನ್ನು ಬೇಬೋ ಎಂದು ಕರೆಯುತ್ತಿರುತ್ತಾರೆ. ಅದೇ ಕಾರಣಕ್ಕೆ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ’ ಎಂದರು ನಾಯಕಿಯಾಗಿ ನಟಿಸುತ್ತಿರುವ ವಿದ್ಯಾ.

ಮನಸ್ಸು ಮಾಡಿದರೆ ಹೆಚ್ಚು ತೂಕವಿರುವವರು ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳುವ ಚಿತ್ರವಿದು ಎನ್ನುವ ವಿದ್ಯಾ, ‘ಈ ಚಿತ್ರದಲ್ಲಿ ನಾನು ಕ್ಲಾಸಿಕಲ್‍ ಡ್ಯಾನ್ಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಸಾಮಾನ್ಯವಾಗಿ ಮನುಷ್ಯ ದಪ್ಪಗಿದ್ದರೆ, ಆತನನ್ನು ಸಮಾಜ ದೂರ ಇಟ್ಟುಬಿಡುತ್ತದೆ. ಅವರಿಂದ ಏನೂ ಕೆಲಸವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತದೆ. ಅದು ತಪ್ಪು ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎಂದರು.

ನಿರ್ದೇಶಕ ಜಯಹರಿ ಪ್ರಸಾದ್‍ ಮಾತನಾಡಿ, ‘ಇದೊಂದು ನೃತ್ಯದ ಕುರಿತಾದ ಚಿತ್ರ. ದಪ್ಪ ಇರುವ ವ್ಯಕ್ತಿಯೊಬ್ಬರು ನೃತ್ಯದಲ್ಲಿ ದೊಡ್ಡ ಸಾಧನೆ ಮಾಡುವ ಕಥೆ ಇರುವ ಚಿತ್ರ. ಈ ಚಿತ್ರದ ಮೂಲಕ ನಾವು ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಬೇಬೋ’ ಚಿತ್ರಕ್ಕೆ ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಚಿಕ್ಕಮಗಳೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ. ಈ ಚಿತ್ರದ ಮೂಲಕ ಅನಿಲ್‍ ಮತ್ತು ಸೂರ್ಯವರ್ಧನ್‍ ಎಂಬ ಇಬ್ಬರು ಹೊಸ ನಾಯಕರನ್ನು ಪರಿಚಯಿಸಲಾಗುತ್ತಿದೆ. ಮಿಕ್ಕಂತೆ ರೇಖಾ ದಾಸ್‍, ರಾಧಾ ರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಮನೋಹರ್‌ ಅವರ ಸಂಗೀತ ಮತ್ತು ಮೋಹನ್‍ ಕುಮಾರ್‌ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *