ವಿ. ಮನೋಹರ್ ಸಂಗೀತ ನಿರ್ದೇಶನದ 150ನೇ ಚಿತ್ರ ʻ31 Days’

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ವಿ. ಮನೋಹರ್ ಇದೀಗ ಒಂದೂವರೆ ಶತಕ ಪೂರೈಸಿದ್ದಾರೆ. ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಮನೋಹರ್, ನಿರಂಜನ್‍ ಶೆಟ್ಟಿ ಅಭಿನಯದ ʻ31 ಡೇಸ್‍’(31 days) ಎಂಬ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ 150 ಚಿತ್ರಗಳನ್ನು ಪೂರೈಸಿದ್ದಾರೆ.

ಸಂಗೀತ ನಿರ್ದೇಶಕರಾಗಿ 150 ಚಿತ್ರಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ’31 ಡೇಸ್‍’ ಚಿತ್ರತಂಡದವರು ಇತ್ತೀಚೆಗೆ ವಿ. ಮನೋಹರ್ ಅವರಿಗೆ ಚಿತ್ರಕಲಾ ಪರಿಷತ್‍ನಲ್ಲಿ ಆತ್ಮೀಯ ಸನ್ಮಾನ ಆಯೋಜಿಸಿತ್ತು. ಅಷ್ಟೇ ಅಲ್ಲ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ‘ನಾನು ಸಂಗೀತ ನಿರ್ದೇಶಕನಾಗಿದ್ದೇ ಅನಿರೀಕ್ಷಿತ. ನಿರ್ದೇಶಕನಾಗಲು ಬಂದ ನಾನು, ಸಂಗೀತ ನಿರ್ದೇಶಕನಾದೆ. ಇದಕ್ಕೆ ಉಪೇಂದ್ರ ಅವರು ಕಾರಣ. ಇಷ್ಟು ವರ್ಷದ ಸಂಗೀತದ ಜರ್ನಿಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರದಲ್ಲಿ 11 ಹಾಡುಗಳಿದೆ.‌ ಜನಪ್ರಿಯ ಗಾಯಕ – ಗಾಯಕಿಯರು ಹಾಡಿದ್ದಾರೆ’ ಎಂದರು.

‘ಜಾಲಿಡೇಸ್’ ಚಿತ್ರದ ಮೂಲಕ ನಾಯಕನಾದ ನಿರಂಜನ್‍ ಶೆಟ್ಟಿ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಪತ್ನಿ ಹೆಸರಿನಲ್ಲಿ ನಿರ್ಮಾಣವನ್ನೂ ಮಾಡಿದ್ದಾರೆ. ‘’31 ಡೇಸ್’ ನಾನು ನಾಯಕನಾಗಿ ನಟಿಸಿರುವ ಎಂಟನೇ ಚಿತ್ರ. 35 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ‌. ಈ ಚಿತ್ರವನ್ನು ನನ್ನ ಪತ್ನಿ ನಾಗವೇಣಿ ಎನ್. ಶೆಟ್ಟಿ ನಿರ್ಮಾಣ‌ ಮಾಡಿದ್ದಾರೆ. ಗುರುಗಳಾದ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರಕಲಾ ಪರಿಷತ್ತಿಗೂ ನನಗೂ ವಿಶೇಷವಾದ ನಂಟಿದೆ. ನಾನು ಇಲ್ಲಿ ಕಲಾ ವಿದ್ಯಾರ್ಥಿಯಾಗಿದ್ದೆ. ನಾನು ಚಿತ್ರಕಲೆ ಕಲಿತ ಜಾಗವಿದು. ಹಾಗಾಗಿ ಇಲ್ಲೇ ಹಾಡುಗಳನ್ನು ಬಿಡುಗಡೆ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ನಮ್ಮ ಚಿತ್ರ ತೆರೆಗೆ ಬರಲಿದೆ’ ಎಂದರು. ಅಷ್ಟೇ ಅಲ್ಲ, ಚಿತ್ರ ಬಿಡುಗಡೆಗೂ ಮೊದಲೇ ಶೇ. 70ರಷ್ಟು ಸೇಫ್‍ ಆಗಿರುವುದಾಗಿ ಹೇಳಿದರು.

ಈ ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶನ ಮಾಡಿದ್ದು, ನಿರಂಜನ್‍ ಎದುರು ಪ್ರಜ್ವಲಿ ಸುವರ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ:

Leave a Reply

Your email address will not be published. Required fields are marked *