ನಾನು ಆಗ ಇದ್ದಿದ್ದರೆ Ravichandran ಅವರಿಗೆ ನಾಯಕಿಯಾಗಿರುತ್ತಿದ್ದೆ ಎಂದ Sreeleela

ರವಿಚಂದ್ರನ್ (Ravichandran) ಅವರ ಜೊತೆಗೆ ನಾಯಕಿಯಾಗಿ ಅಭಿನಯಿಸಬೇಕು ಎಂಬುದು ಹಲವು ನಾಯಕಿಯರ ಆಸೆಯಾಗಿತ್ತು. ಅದೇ ರೀತಿ, ರವಿಚಂದ್ರನ್ ಅವರು ಹೀರೋ ಆಗಿ ನಟಿಸುವಾಗ ತಾನು ಇದ್ದಿದ್ದರೆ ಅವರಿಗೆ ಖಂಡಿತಾ ನಾಯಕಿಯಾಗಿರುತ್ತಿದ್ದೆ ಎಂದು ನಟಿ ಶ್ರೀಲೀಲಾ (Sreeleela) ಹೇಳಿಕೊಂಡಿದ್ದಾರೆ.
ಈ ಶುಕ್ರವಾರ (ಜುಲೈ 18) ಬಿಡುಗಡೆಯಾಗುತ್ತಿರುವ ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರದ ಮೂಲಕ ಶ್ರೀಲೀಲಾ, ಕೆಲವು ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದಾಗ, ಶ್ರೀಲೀಲಾ ಅಷ್ಟು ದೊಡ್ಡ ನಟಿಯಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿ ಅವರು ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ಮೂರು ವರ್ಷಗಳ ನಂತರ ಶ್ರೀಲೀಲಾ ಅಭಿನಯದ ಕನ್ನಡ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ,
‘ಜೂನಿಯರ್’ ಕುರಿತು ಮಾತನಾಡುವ ಶ್ರೀಲೀಲಾ, ‘ಈ ಚಿತ್ರ ಯಾವತ್ತೋ ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಶುರು ಮಾಡಿದಾಗ ನಾನು ಮೊದಲ ವರ್ಷದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದೆ. ಈಗ ನಾನು ಡಾಕ್ಟರ್ ಆಗಿದ್ದೀನಿ. ನನ್ನ ಪಾಲಿಗೆ ಇದೊಂದು ದೊಡ್ಡ ಚಿತ್ರ. ಇದೊಂದು ಅದ್ಭುತ ಅನುಭವ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಬಹಳ ಸೈಲೆಂಟ್. ಆದರೆ, ಕೆಲಸ ಮಾಡುವುದರಲ್ಲಿ ದೈತ್ಯ. ನನಗೆ ಆರು ತಿಂಗಳಿಗಾದರೂ ಒಂದು ಚಿತ್ರ ಕೊಡಿ ಎಂದು ಅವರಲ್ಲಿ ಮನವಿ ಮಾಡುತ್ತೇನೆ. ಅವರು ಕಥೆ ಹೇಳುವ ರೀತಿ ನನಗೆ ಇಷ್ಟ. ಈ ಚಿತ್ರದಲ್ಲಿ ಹಲವು ಲೇಯರ್‍ಗಳಿವೆ’ ಎನ್ನುತ್ತಾರೆ.
ರವಿಚಂದ್ರನ್ ಅವರ ಜೊತೆಗೆ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ಶ್ರೀಲೀಲಾ, ‘ನಾನು ಆ ಸಮಯದಲ್ಲಿ ಇದ್ದಿದ್ದರೆ ರವಿಚಂದ್ರನ್ ಅವರಿಗೆ ನಾಯಕಿಯಾಗಿರುತ್ತಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ನಾನು ಅವರ ಜೊತೆಗೆ ನಟಿಸುತ್ತಿದ್ದೇನೆ. ನಾನು ಎಲ್ಲಿಗೆ ಹೋದರೂ, ಅದರಲ್ಲೂ ಮುಂಬೈನಲ್ಲಿ ರವಿಚಂದ್ರನ್ ಅವರ ಬಗ್ಗೆ ಮಾತನಾಡುತ್ತಾರೆ. ಜೆನಿಲಿಯಾ ಅವರು ದೊಡ್ಡ ಗ್ಯಾಪ್‍ನ ನಂತರ ನಟನೆಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಅದ್ಭುತವಾಗಿದೆ’ ಎನ್ನುತ್ತಾರೆ
ನಾಯಕ ಕಿರೀಟಿಗೆ ಈ ಸಿನಿಮಾ ಬಹಳ ಮುಖ್ಯ ಎನ್ನುವ ಶ್ರೀಲೀಲಾ, ‘ಕಿರೀಟಿ ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ನಾನು ‘ವೈರಲ್ ವಯ್ಯಾರಿ’ ಆಗಿ ಗುರುತಿಸಿಕೊಂಡಿದ್ದೇನೆ ಎಂದರೆ ಡಿಎಸ್‍ಪಿ ಕಾರಣ. ನನಗೆ ಒಂದು ಅದ್ಭುತ ಹಾಡು ಕೊಟ್ಟಿದ್ದಾರೆ’ ಎಂದು ಮಾತು ಮುಗಿಸುತ್ತಾರೆ.

‘ಜೂನಿಯರ್’ ಚಿತ್ರದಲ್ಲಿ ಕಿರೀಟಿ ಜೊತೆಗೆ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, ‘ಬಾಹುಬಲಿ’ ಮತ್ತು ‘RRR’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಸೆಂಥಿಲ್ ಕುಮಾರ್ ಈ ಚಿತ್ರದ ಛಾಯಾಗ್ರಾಹಣ ಮಾಡಿದ್ದಾರೆ.
2 thoughts on “ನಾನು ಆಗ ಇದ್ದಿದ್ದರೆ Ravichandran ಅವರಿಗೆ ನಾಯಕಿಯಾಗಿರುತ್ತಿದ್ದೆ ಎಂದ Sreeleela”