Shivanna 131; ಸೆಟ್‌ಗೆ ಮರಳಿದ ಶಿವರಾಜ್‌ಕುಮಾರ್; ಸಂತಸ ಹಂಚಿಕೊಂಡ ನಿರ್ದೇಶಕ ಕಾರ್ತಿಕ್

ಮೂತ್ರಕೋಶದ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡ ಶಿವರಾಜ್‌ ಕುಮಾರ್‌ ಚಿತ್ರೀಕರಣಕ್ಕೆ ಮರಳಿದ್ದಾರೆ. ಇನ್ನೂ ಹೆಸರಿಡದ ಶಿವಣ್ಣನ 131 (Shivanna 131) ಚಿತ್ರದ ಸೆಟ್‌ಗೆ ಹ್ಯಾಟ್ರಿಕ್‌ ಹೀರೋ ತೆರಳಿದ್ದಾರೆ. ಅನಾರೋಗ್ಯದಲ್ಲಿದ್ದಾಗಲೇ 45 ಸಿನಿಮಾದ ಕೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಚೇತರಿಸಿಕೊಂಡು ಈಗ ಮತ್ತೆ ಎನರ್ಜಿಟಿಕ್‌ ಆಗಿ ಮರಳಿದ್ದಾರೆ.

16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಣ್ಣ ಮಾತನಾಡುವಾಗ ಅಭಿಮಾನಿಗಳು ಮತ್ತು ಹಿತೈಷಿಗಳ ಅಪಾರ ಬೆಂಬಲಕ್ಕಾಗಿ ಕೃತಜ್ಞತೆ ತಿಳಿಸಿದ್ದರು. ‘ನಿಮ್ಮ ಎಲ್ಲ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳು ನನ್ನನ್ನು ಇಲ್ಲಿಗೆ ಕರೆತಂದಿವೆ. ನಾನು ಅದೇ ಶಕ್ತಿ ಮತ್ತು ಹುರುಪಿನೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆʼ ಎಂದಿದ್ದರು. ಅಲ್ಲದೇ ಇತ್ತೀಚೆಗೆ ಮಾಧ್ಯಮ ಒಂದಕ್ಕೆ ಸಂದರ್ಶನ ಕೊಟ್ಟಾಗಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅದರಂತೆ ಸೋಮವಾರದಿಂದ ಕೆಲಸವನ್ನು ಪ್ರಾರಂಭಿಸಿದ್ದಾರೆ.

‘ಶಿವಣ್ಣ 131’ ಚಿತ್ರವನ್ನು ನಿರ್ದೇಶಿಸುತ್ತಿರುವ ಕಾರ್ತಿಕ್ ಅದ್ವೈತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಬಲಿಷ್ಠವಾದ ಕಂಬ್ಯಾಕ್ ದೇವನಿಗೆ ತಿಳಿದಿರುವ ವಿಷಯಗಳಲ್ಲಿ ಒಂದಾಗಿದೆ. ಮತ್ತೆ ಸ್ವಾಗತ, ರಾಜ!’ ಎಂದಿದ್ದಾರೆ. ಚಿಕಿತ್ಸೆಗೆ ತೆರೆಳುವ ಮುನ್ನ ಈ ಚಿತ್ರದ ಕಾಲು ಭಾಗದಷ್ಟು ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಮುಂದಿನ ಭಾಗದ ಚಿತ್ರೀಕರಣಕ್ಕಾಗಿ ತಂಡದ ಜೊತೆ ಶಿವಣ್ಣ ಸೇರಿಕೊಂಡಿದ್ದಾರೆ.

ಶಿವರಾಜಕುಮಾರ್ ಅವರು ಚಿತ್ರದಲ್ಲಿ ದೇವ ಪಾತ್ರದಲ್ಲಿ ನಟಿಸಲಿದ್ದಾರೆ. ಭುವನೇಶ್ವರಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಎನ್ ರೆಡ್ಡಿ ಮತ್ತು ಸುಧೀರ್ ಪಿ ನಿರ್ಮಿಸಿರುವ ಈ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್‌ ಜೊತೆ ನವೀನ್ ಶಂಕರ್ ನಟಿಸುತ್ತಿದ್ದಾರೆ. ಚಿತ್ರ ತಂಡ ಉಳಿದ ಕಲಾವಿದರ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ.

ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ವಿಕ್ರಮ್ ವೇದ, ಆರ್‌ಡಿಎಕ್ಸ್ ಮತ್ತು ಕೈತಿ ಚಿತ್ರದ ಖ್ಯಾತಿ ಸ್ಯಾಮ್ ಸಿಎಸ್ ಮಾಡುತ್ತಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ, ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಇದೆ. ಮಹೇಂದ್ರ ಸಿಂಹ ಅವರ ಛಾಯಾಗ್ರಾಹಣ ಚಿತ್ರಕ್ಕಿದೆ.

Leave a Reply

Your email address will not be published. Required fields are marked *