ಶಿವರಾಜಕುಮಾರ್ ಆಪರೇಷನ್ ಯಶಸ್ವಿ: ಅವರೀಗ ಕ್ಯಾನ್ಸರ್ ಮುಕ್ತ

ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟ ಶಿವರಾಜಕುಮಾರ್, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ವೀಡಿಯೋ ಬಿಡುಗಡೆ ಮಾಡಿರುವ ಅವರು, ‘ಕ್ಯಾನ್ಸರ್ ಪೀಡಿ ಮೂತ್ರಕೋಶವನ್ನು ತೆಗೆದಿದ್ದಾರೆ. ನಾನೀಗ ಕ್ಯಾನ್ಸರ್ ಫ್ರೀ. ಇನ್ನು ಕೆಲವು ತಿಂಗಳುಗಳಲ್ಲಿ ಮತ್ತೆ ನಿಮ್ಮ ಮುಂದೆ ಹಳೆಯ ಶಿವಣ್ಣನಾಗಿ ಬರಲಿದ್ದೇನೆ’ ಎಂದು ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿದ್ದ ಆತಂಕವನ್ನು ದೂರ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವರಾಜಕುಮಾರ್ ಅವರಿಗೆ ಡಿ. 24ರಂದು ಅಮೇರಿಕಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ತಮಿಳು ನಾಡು ಮೂಲದ ವೈದ್ಯ ಡಾ. ಮುರುಗೇಶನ್ ಮನೋಹರನ್ ಶಸ್ತ್ರ ಚಿಕಿತ್ಸೆ ಮಾಡಿದ್ದರು. ನಂತರ ವೀಡಿಯೋ ಸಂದೇಶವೊಂದರಲ್ಲಿ, ಶಿವರಾಜಕುಮಾರ್ ಚಿಕಿತ್ಸೆಗೆ ಸ್ಪಂದಿಸಿದ್ದಾರೆ, ಅವರೀಗ ಆರೋಗ್ಯವಾಗಿದ್ದಾರೆ ಎಂದು ಘೋಷಿಸಿದ್ದರು.
ಅದರಂತೆ ಶಿವರಾಜಕುಮಾರ್ ಗುಣಮುಖರಾಗುತ್ತಿದ್ದಾರೆ. ಬುಧವಾರ ಅಮೇರಿಕಾದಿಂದಲೇ ವೀಡಿಯೋ ಮಾಡಿ ಕಳಿಸಿದ್ದಾರೆ. ಈ ವೀಡಿಯೋದಲ್ಲಿ ಅವರ ಪತ್ನಿ ಗೀತಾ ಶಿವರಾಜಕುಮಾರ್ ಸಹ ಇದ್ದಾರೆ. ಈ ವೀಡಿಯೋದಲ್ಲಿ ಮಾತನಾಡಿರುವ ಅವರು, ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮಾತನಾಡುವಾಗ ಎಲ್ಲಿ ಎಮೋಷನಲ್ ಆಗುತ್ತೀನೋ ಎಂದು ಭಯವಾಗುತ್ತಿದೆ. ನಾನು ಭಾರತದಿಂದ ಇಲ್ಲಿಗೆ ಬರುವಾಗ ಭಾವುಕನಾಗಿದ್ದೆ. ನನಗೂ ಭಯ ಇತ್ತು. ಭಯ ನೀಗಿಸೋಕೆ ಅಭಿಮಾನಿಗಳು, ಸ್ನೇಹಿತರು, ಸಂಬಂಧಿಗಳು ಹಾಗೂ ವೈದ್ಯರು ಇರುತ್ತಾರೆ. ನನಗೆ ಕೀಮೋ ಮಾಡಿದ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಅದೇ ಉತ್ಸಾಹದಿಂದ ನಾನು ‘45’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಿದೆ. ಆಪರೇಷನ್ ದಿನ ಹತ್ತಿರ ಬರುತ್ತಿದ್ದಂತೆ ಟೆನ್ಶನ್ ಆಗಿತ್ತು. ಈ ಸಂದರ್ಭದಲ್ಲಿ ಪತ್ನಿ ಗೀತಾ ಬೆಂಬಲ ದೊಡ್ಡದು. ಆಕೆ ಇಲ್ಲದೆ ನಾನಿಲ್ಲ’ ಎಂದಿದ್ದಾರೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು, ‘ಎಲ್ಲರೂ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ತಿಳಿದುಕೊಂಡಿದ್ದಾರೆ. ಆದರೆ, ಅದಲ್ಲ. ನನಗೆ ಯೂರಿನರಿ ಬ್ಲಾಡರ್ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಆಗಿದ್ದ ಮೂತ್ರಕೋಶ ತೆಗೆದಿದ್ದಾರೆ. ಹೊಸ ಬ್ಲಾಡರ್ ಹಾಕಿದ್ದಾಗಿ ತಿಳಿಸಿದ್ದಾರೆ. ವಿವರವಾಗಿ ಹೇಳಿದರೆ ಗಾಬರಿಯಾಗುತ್ತದೆ. ಎಲ್ಲರ ಹಾರೈಕೆ, ಪ್ರಾರ್ಥನೆಯನ್ನು ಯಾವತ್ತೂ ಮರೆಯುವುದಿಲ್ಲ. ಎಲ್ಲರಿಗೂ ಹೊಸ ವರ್ಷದ ಶಭಾಶಯಗಳು’ ಎಂದು ಹಾರೈಸಿದ್ದಾರೆ.
ಮಾರ್ಚ್ ತಿಂಗಳ ನಂತರ ಮತ್ತದೆ ಉತ್ಸಾಹದಿಂದ ಬರುವುದಾಗಿ ಹೇಳಿದ ಶಿವರಾಜಕುಮಾರ್, ‘ಮೊದಲ ಒಂದು ತಿಂಗಳು ನಿಧಾನವಾಗಿ ಸಾಗಿ ಎಂದು ವೈದ್ಯರು ಹೇಳಿದ್ದಾರೆ. ಮಾರ್ಚ್ನಿಂದ ಎಂದಿನ ಹಾಗೆ ಇರಿ ಇಂದಿದ್ದಾರೆ. ಮತ್ತೆ ಮೊದಲಿನ ತರಹ ಮುಂದುವರೆಯುತ್ತೇನೆ. ನೃತ್ಯ, ಫೈಟಿಂಗ್, ಸ್ಟೈಲ್ ಎಲ್ಲವೂ ಡಬ್ಬಲ್ ಆಗುತ್ತದೆ’ ಎಂದು ಹೇಳಿದ್ದಾರೆ.
ಅಂದಹಾಗೆ, ಜನವರಿ 26ರಂದು ಶಿವರಾಜಕುಮಾರ್, ಭಾರತಕ್ಕೆ ವಾಪಸ್ಸಾಗಲಿದ್ದಾರೆ.