Sapthami Gowda: ಅಂಬಿಕಳಾದ ಸಪ್ತಮಿ; ‘ದಿ ರೈಸ್‍ ಆಫ್‍ ಅಶೋಕ’ಚಿತ್ರಕ್ಕೆ ನಾಯಕಿ

ಕಳೆದ ವರ್ಷ ಬಿಡುಗಡೆಯಾದ ಯುವ ರಾಜಕುಮಾರ್‌ ಅಭಿನಯದ ‘ಯುವ’ ಚಿತ್ರದ ನಂತರ ಸಪ್ತಮಿ ಗೌಡ (Sapthami Gowda) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಬಿಟ್ಟರೆ, ಕನ್ನಡದಲ್ಲಿ ಸಪ್ತಮಿ ಯಾವೊಂದು ಚಿತ್ರದಲ್ಲಿ ನಟಿಸುತ್ತಿರುವ ವಿಷಯವೂ ಬಹಿರಂಗವಾಗಿರಲಿಲ್ಲ.

ಹೀಗಿರುವಾಗಲೇ, ಸತೀಶ್‍ ನೀನಾಸಂ ಅಭಿನಯದ ‘ದಿ ರೈಸ್‍ ಆಫ್‍ ಅಶೋಕ’ (The Rise Of Ashoka) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಅಂಬಿಕಾ ಎಂಬ ಪಾತ್ರದಲ್ಲಿ ಸಪ್ತಮಿ ನಟಿಸುತ್ತಿದ್ದು, ಆಕೆಯ ಮೊದಲ ಪೋಸ್ಟರ್‌ ಭಾನುವಾರ ಬಿಡುಗಡೆ ಆಗಿದೆ. ಸೈಕಲ್‍ ಮೇಲೆ ಹೂವಿನ ಬುಟ್ಟಿ ಹೊತ್ತಿರುವ ಹಳ್ಳಿ ಹುಡುಗಿಯಾಗಿ ಸಪ್ತಮಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸತೀಶ್ ನೀನಾಸಂ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾದ ‘ಅಶೋಕ ಬ್ಲೇಡ್‍’ (Ashoka Blade) ಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೆಸರನ್ನು ಇಡಲಾಗಿದ್ದು, ಈ ಶೀರ್ಷಿಕೆಯಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ದೇಶಕ ವಿನೋದ್ ದೊಂಡಾಲೆ ಕಳೆದ ವರ್ಷ ನಿಧನರಾದರು. ಅದಕ್ಕೂ ಮೊದಲೇ ಅವರು ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದಾರಂತೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು.

ಇದೀಗ ಈ ಚಿತ್ರವನ್ನು ಮನು ಶೇಡ್ಗಾರ್‌ ಮುಂದುವರೆಸುತ್ತಿದ್ದಾರೆ. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ದಿ ರೈಸ್ ಆಫ್ ಅಶೋಕ’ ಚಿತ್ರದ ಉಳಿದ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚೆನ್ನಪಟ್ಟಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಮುಕ್ತಾಯವಾಗಲಿದೆ.

‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸತೀಶ್‍ ನೀನಾಸಂ ಜೊತೆಗೆ ಸಪ್ತಮಿ ಗೌಡ, ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೂಲಕ ಒಂದು ಬಂಡಾಯದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಕಥೆಗಾರ ಟಿ.ಕೆ. ದಯಾನಂದ್‍. ಈ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್, ‘ರೈಸ್ ಆಫ್ ಅಶೋಕ’ ಚಿತ್ರವನ್ನು ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

(Satish Neenasam’s film The Rise of Ashoka features Saptami Gowda as the lead actress. She will be seen in the role of Ambika. The poster revealing Ambika’s character was released on Sunday.)



Leave a Reply

Your email address will not be published. Required fields are marked *