‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡಕ್ಕೀಗ ನಿರಾಳ; ತಡೆಯಾಜ್ಞೆ ತೆರವು ಗೊಳಿಸಿದ ನ್ಯಾಯಲಯ

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆದುರಾದ ಸಂಕಷ್ಟ ಇದೀಗ ಬಗೆಹರಿದಿದೆ. ಚಿತ್ರವು ಶುಕ್ರವಾರ (ಜನವರಿ 10) ಬಿಡುಗಡೆ ಆಗಬೇಕಿತ್ತು. ಆದರೆ, ಹೈದರಾಬಾದ್‍ನ ನ್ಯಾಯಾಲಯವು ಚಿತ್ರದ ಬಿಡುಗಡೆ ಮೇಲೆ ತಡೆಯಾಜ್ಞೆ ನೀಡಿದ್ದರಿಂದ, ಚಿತ್ರವು ಅಂದುಕೊಂಡಂತೆ ಬಿಡುಗಡೆ ಆಗಲಿಲ್ಲ. ಇದೀಗ ನ್ಯಾಯಲಯವು ತಡೆಯಾಜ್ಞೆನ್ನು ತೆರವುಗೊಳಿಸಿದ್ದು, ಸಮಸ್ಯೆ ಎದುರಾದಷ್ಟೇ ಬೇಗ ಪರಿಹಾರವೂ ಸಿಕ್ಕಿದೆ.
ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ ನಿರಾಳವಾಗಿದ್ದು, ಸದ್ಯದಲ್ಲೇ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರವು ಮುಂದಿನ ಶುಕ್ರವಾರ (ಜನವರಿ 17) ರಾಜ್ಯಾದ್ಯಂತ ಬಿಡುಗಡೆಯಾಗುವ ಸಾಧ್ಯತೆ ಇದೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕಿದ್ದ ಸಮಸ್ಯೆ ಬಗೆಹರಿದಿರುವ ಕುರಿತು ಮಾತನಾಡಿರುವ ನಿರ್ಮಾಪಕ ಛಲವಾದಿ ಕುಮಾರ್, ‘ನಮ್ಮ ಚಿತ್ರದ ನಿರ್ದೇಶಕ ನಾಗಶೇಖರ್ ಈ ಹಿಂದೆ ತೆಲುಗಿನಲ್ಲಿ ‘ಗುರ್ತುಂಡ ಸೀತಾಕಲಂ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರವು 2022ರಲ್ಲಿ ಬಿಡುಗಡೆ ಆಗಿತ್ತು. ನಿರ್ದೇಶನದ ಜೊತೆಗೆ ಅವರು ಚಿತ್ರದ ಸಹನಿರ್ಮಾಪಕರಲ್ಲೊಬ್ಬರಾಗಿದ್ದರು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಚಿತ್ರದಲ್ಲಾದ ನಷ್ಟವನ್ನು ತುಂಬಿಕೊಡಲು, ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ಅವರು ಸಹನಿರ್ಮಾಪಕ ರಾಮರಾವ್ ಚಿಂತಪಲ್ಲಿ ಎನ್ನುವವರಿಗೆ ಪತ್ರ ಬರೆದುಕೊಟ್ಟಿದ್ದರು. ಬೇರೆ ಚಿತ್ರಗಳನ್ನು ಮಾಡಿದರೂ, ಅದರಲ್ಲಿ ಬರುವ ಲಾಭದಲ್ಲಿ ದುಡ್ಡು ಕೊಡುತ್ತೇನೆ ಎಂದು ಹೇಳಿದ್ದರಂತೆ. ಆ ನಂತರ ಅವರು ‘ಸಂಜು ವೆಡ್ಸ್ ಗೀತಾ 2’ ಚಿತ್ರ ಮಾಡಿದ್ದಾರೆ. ತಮಗೆ ಚಿತ್ರ ಮಾಡಿಕೊಡುವುದಾಗಿ ಹೇಳಿ, ನಾಗಶೇಖರ್ ಮಾತು ತಪ್ಪಿದ್ದಾರೆ ಮತ್ತು ಬೇರೆ ಚಿತ್ರ ಮಾಡಿದರೂ ನಷ್ಟವನ್ನು ಭರಿಸಿಲ್ಲ ಎಂದು ರಾಮರಾವ್, ನ್ಯಾಯಾಲಯಕ್ಕೆ ಆ ಪತ್ರವನ್ನು ತೋರಿಸಿ, ಚಿತ್ರಕ್ಕೆ ತಡೆಯಾಜ್ಞೆ ತಂದಿದ್ದರು’ ಎನ್ನುತ್ತಾರೆ ಕುಮಾರ್.
ಲಾಭ ಕೊಡುವುದಕ್ಕೆ ನಾಗಶೇಖರ್ ನಮ್ಮ ಚಿತ್ರದ ನಿರ್ಮಾಪಕರಲ್ಲ, ನಿರ್ದೇಶಕರಷ್ಟೇ ಎನ್ನುವ ಕುಮಾರ್, ‘ಚಿತ್ರಕ್ಕೆ ನಾನು ಮತ್ತು ನನ್ನ ಮಗ ಅಧಿಕೃತ ನಿರ್ಮಾಪಕರು. ಈ ಚಿತ್ರದ ನಿರ್ಮಾಣಕ್ಕೂ ನಾಗಶೇಖರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರವನ್ನು ಪವಿತರ ಫಿಲಂಸ್ ಇಂಟರ್‍ನ್ಯಾಷನಲ್ ಸಂಸ್ಥೆಯ ಮೂಲಕ ನಿರ್ಮಿಸಿದ್ದೇವೆ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಾಗ, ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ. ಬಿಡುಗಡೆಗೆ ಸಿದ್ಧವಿದ್ದ ಚಿತ್ರವನ್ನು ಹಿಂದಿನ ತಡೆದಿದ್ದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಸದ್ಯದಲ್ಲೇ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಅದರಂತೆ ಶನಿವಾರ ಮಧ್ಯಾಹ್ನ ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದ್ದು, ಇದರಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಕುಮಾರ್ ಹಂಚಿಕೊಳ್ಳುವ ನಿರೀಕ್ಷೆ ಇದೆ.
(After a Hyderabad court vacated the stay order, the Kannada film ‘Sanju Weds Geetha 2’, directed by Nagashekar and produced by Chalavadi Kumar, will release on January 17)