Sanjana Anand; ‘ಎಕ್ಕ’ಗೆ ಸಿಕ್ಕಳು ನಾಯಕಿ; ಯುವಗೆ ಸಂಜನಾ ಆನಂದ್ ಜೋಡಿ

ಸಂಜನಾ ಆನಂದ್ ಅಭಿನಯದ ‘ರಾಯಲ್’ ಚಿತ್ರವು ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಸುದ್ದಿಯೇ ಇಲ್ಲ. ಅದ್ಯಾಕೋ ಪ್ರಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ‘ರಾಯಲ್’ ತಂಡ ಯಾವಾಗ ಪ್ರಚಾರ ಶುರು ಮಾಡುತ್ತದೋ ಗೊತ್ತಿಲ್ಲ. ಈ ಮಧ್ಯೆ, ಇನ್ನೊಂದು ಕಾರಣಕ್ಕೆ ಸಂಜನಾ ಸುದ್ದಿಯಲ್ಲಿದ್ದಾರೆ.

ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’, ಜೂನ್ 06ರಂದು ಬಿಡುಗಡೆ ಆಗಲಿದೆ. ಈ ಮಧ್ಯೆ, ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರದಲ್ಲಿ ಸಂಪದ ಹುಲಿವಾನ ಒಬ್ಬ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತದಲ್ಲೂ ಅವರು ಕಾಣಿಸಿಕೊಂಡಿದ್ದರು. ಈಗ ಚಿತ್ರದ ಇನ್ನೊಬ್ಬ ನಾಯಕಿಯಗಿ ಸಂಜನಾ ಆನಂದ್ ಆಯ್ಕೆಯಾಗಿದ್ದು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
‘ಎಕ್ಕ’ ಚಿತ್ರವನ್ನು ಕನ್ನಡ ಚಿತ್ರರಂಗದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ನಿರ್ಮಿಸುತ್ತಿವೆ. PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
ಇನ್ನು, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್ ಪದಕಿ. ಈ ಹಿಂದೆ ‘ರತ್ನನ್ ಪ್ರಪಂಚ’ ಮತ್ತು ‘ಉತ್ತರಕಾಂಡ’ ಚಿತ್ರಗಳನ್ನು ನಿರ್ದೇಶಿಸಿರುವ ರೋಹಿತ್, ಈಗ ಮಾಸ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ರಕ್ತದ ಹಿನ್ನೆಲೆಯಲ್ಲಿ ಮನುಷ್ಯನ ತಳಮಳವಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರಂತೆ. ಇದೊಂದು ಮಾಸ್ ಚಿತ್ರವಾದರೂ, ಇಡೀ ಕುಟುಂಬ ನೋಡಬಹುದಾದ ಚಿತ್ರ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ವಿಷಯ ಈ ಚಿತ್ರದಲ್ಲಿದೆ ಎಂದು ಅವರು ಕೆಲವು ತಿಂಗಳುಗಳ ಹಿಂದೆ ನಡೆದ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.
‘ಎಕ್ಕ’ ಚಿತ್ರದಲ್ಲಿ ಯುವ, ಸಂಜನಾ ಆನಂದ್ ಮತ್ತು ಸಂಪದ ಹುಲಿವಾನ ಜೊತೆಗೆ ಅತುಲ್ ಕುಲಕರ್ಣಿ, ಶ್ರುತಿ, ಡಾ. ಸೂರಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್ ಮುಂತಾದವರು ನಟಿಸುತ್ತಿದ್ದಾರೆ.
(Sanjana Anand Joined As Female Lead in-Yuva Rajkumar Starrer Ekka kannada Film)