Thane Movie; ಶೀಘ್ರದಲ್ಲೇ ತೆರೆಗೆ ಬರಲಿದೆ ಕ್ರೈಂ ಥ್ರಿಲ್ಲರ್ ʻಠಾಣೆʼ

ಕ್ರೈಂ, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಎಸ್.ಭಗತ್ ರಾಜ್ ನಿರ್ದೇಶನದ ‘ಠಾಣೆ’ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ. ಪಿಸಿಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ ‘ಠಾಣೆ’ ಚಿತ್ರದ ಪೋಸ್ಟರನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.
‘20 ವರ್ಷಗಳ ಹಿಂದೆ ಮಾಧ್ಯಮ ಮತ್ತು ಪೊಲೀಸ್ ಠಾಣೆಗಳ ಪ್ರಮಾಣ ಕಡಿಮೆ ಇದ್ದ ಕಾರಣ ಜನರೇ ನ್ಯಾಯಕ್ಕಾಗಿ ಹೋರಾಡಿ ಗಮನ ಸೆಳೆಯುತ್ತಿದ್ದರು. ಆ ಕಾಲದಲ್ಲಿ ಚಿತ್ರದ ನಾಯಕ ಕಾಳಿ ನ್ಯಾಯಕ್ಕಾಗಿ ಯಾವ ರೀತಿಯ ಹೋರಾಟ ಮಾಡಿದ ಎನ್ನುವುದೇ ಚಿತ್ರದ ಕಥೆ. ಹಳೆಯ ಕಟ್ಟಡಗಳು, ಸ್ಥಳಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ’ ಎಂದು ನಿರ್ದೇಶಕ ಎಸ್. ಭಗತ್ ರಾಜ್ ಹೇಳಿದ್ದಾರೆ.
ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸಿದ್ದಾರೆ. ‘ಒಗಟುಗಳನ್ನು ಬಳಸಿಕೊಂಡು ಒಂದು ಹಾಡು ಸಿದ್ಧಪಡಿಸಿದ್ದೇವೆ. ‘ಮಜಾ ಟಾಕೀಸ್’ ಖ್ಯಾತಿಯ ರೇಮೊ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ರಾಜೇಶ್ ಕೃಷ್ಣ, ರೇಮೊ ಮತ್ತು ರಿಯಾಲಿಟಿ ಶೋಗಳಲ್ಲಿ ಹಾಡಿರುವ ಕೆಲ ಮಕ್ಕಳು ಹಾಡುಗಳಿಗೆ ಧ್ವನಿಯಾಗಿದ್ದಾರೆ’ ಎಂದರು ಮಾನಸ ಹೊಳ್ಳ.
ರಂಗಭೂಮಿ ಕಲಾವಿದ ಪ್ರವೀಣ್‌ಗೆ ವಿದುಷಿ ಹರಿಣಾಕ್ಷಿ ಜೋಡಿಯಾಗಿದ್ದಾರೆ. ಗಾಯತ್ರಿ ಎಂ ಬಂಡವಾಳ ಹೂಡಿದ್ದು, ಬಿ.ವಿ.ರಾಜಾರಾಂ, ಬಲ ರಾಜವಾಡಿ, ಪಿ.ಡಿ.ಸತೀಶ್ ಚಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಚಿತ್ರಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ನಿರ್ದೇಶಕ ಎಸ್. ಭಗತ್ ರಾಜ್ ಈ ಹಿಂದೆ ನಟ, ನಿರ್ದೇಶಕ ಕಾಶಿನಾಥ್, ರಾಮನಾಥ್ ಋಗ್ವೇದಿ, ಗುರುಪ್ರಸಾದ್ ಮುಂತಾದವರ ಜೊತೆ ಕೆಲಸ ಮಾಡಿದ್ದರು.
