ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು

UI OTT Release

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಮಧ್ಯೆ, ಚಿತ್ರವು ಸದ್ಯದಲ್ಲೇ ಸನ್‍ ನೆಕ್ಸ್ಟ್ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿಯೊಂದು ಓಟಿಟಿಯಲ್ಲಿ ಕೇಳಿಬಂದಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿರುವ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕೆ.ಪಿ. ಶ್ರೀಕಾಂತ್‍, ‘ಚಿತ್ರದ ೋಟಿಟಿ ಹಕ್ಕುಗಳನ್ನು ಸನ್‍ ನೆಕ್ಸ್ಟ್ ಸಂಸ್ಥೆಯು ಖರೀದಿಸಿದೆ ಮತ್ತು ಚಿತ್ರವು ಸದ್ಯದಲ್ಲೇ, ಆ ಓಟಿಟಿಯಲ್ಲಿ ಸ್ಟ್ರೀಮ್‍ ಆಗಲಿದೆ ಎಂಬಂತಹ ಸುದ್ದಿಯೊಂದು ಕೆಲವು ದಿನಗಳಿಂದ ಕೇಳಿಬರುತ್ತಿದೆ. ಈ ಮೂಲಕ ನಾವು ಅದೊಂದು ಸುಳ್ಳುಸುದ್ದಿ ಎಂದು ಸ್ಪಷ್ಟೀಕರಿಸಬಯಸುತ್ತೇವೆ. ಚಿತ್ರದ ಓಟಿಟಿ ಮತ್ತು ಇತರೆ ಹಕ್ಕುಗಳನ್ನು ಯಾವ ಸಂಸ್ಥೆ ಖರೀದಿಸಿದೆ ಎಂಬುದನ್ನು ತಂಡದಿಂದ ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ. ಈ ಮಧ್ಯೆ, ಈ ವಿಷಯವಾಗಿ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

‘UI’ ಚಿತ್ರವು ಬಿಡುಗಡೆಯಾದಾಗಿನಿಂದ ಇದುವರೆಗೂ 30 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದ ಸುದ್ದಿ ಇದೆ. ಆದರೆ, ಚಿತ್ರವು ಕೇವಲ ಬಜೆಟ್‍ನ ಅರ್ಧ ಭಾಗವನ್ನು ಮಾತ್ರ ವಾಪಸ್ಸು ಪಡೆದುಕೊಂಡಿದೆ ಎಂದು ಕೊಯಿಮೊಯಿ ಡಾಟ್‍ಕಾಮ್‍ ವರದಿ ಮಾಡಿದೆ. ಮೂಲಗಳ ಪ್ರಕಾರ, ‘UI’ ಚಿತ್ರದ ಬಜೆಟ್‍ 50 ಕೋಟಿ ರೂ.ಗಳಿಗೂ ಹೆಚ್ಚು ಮೀರಿದ್ದು, ಈ ಪೈಕಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಿಂದ 30 ಕೋಟಿ ರೂ. ಮಾತ್ರ ಗಳಿಕೆಯಾಗಿದೆ. ಇದರಲ್ಲಿ ನಿರ್ಮಾಪಕರ ಪಾಲು ಬರೀ 15 ಕೋಟಿ ಮಾತ್ರ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಚಿತ್ರದ ಸ್ಯಾಟಿಲೈಟ್‍ ಹಕ್ಕುಗಳು ಮಾರಾಟವಾಗಿದೆ ಎಂದು ಹೇಳಲಾಗುತ್ತಿದ್ದು, ಡಿಜಿಟಲ್‍ ಹಕ್ಕುಗಳು ಇನ್ನಷ್ಟೇ ಮಾರಾಟವಾಗಬೇಕಿದೆಯಂತೆ. ಡಿಜಿಟಲ್‍ ಹಕ್ಕುಗಳು ದೊಡ್ಡ ಮಟ್ಟಕ್ಕೆ ಮಾರಾಟವಾದರೆ, ಮಾತ್ರ ಚಿತ್ರಕ್ಕೆ ಹಾಕಿದ ಬಂಡವಾಳ ಮರಳಿ ಪಡೆಯಬಹುದು, ಇಲ್ಲವಾದರೆ ನಿರ್ಮಾಪಕರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

‘UI’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್‍ ಎಂಟರ್‍ಟೈನರ್ಸ್‍ ಸಂಸ್ಥೆಗಳಡಿ ಜಿ. ಮನೋಹರನ್‍ ಮತ್ತು ಶ್ರೀಕಾಂತ್‍ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ರವಿಶಂಕರ್‍, ಅಚ್ಯುತ್‍ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

Leave a Reply

Your email address will not be published. Required fields are marked *