ಕರಾವಳಿ ಕಥೆಯೊಂದಿಗೆ ಬಂದ್ರು ರೂಪೇಶ್‍ ಶೆಟ್ರು; ಫೆಬ್ರವರಿ 07ಕ್ಕೆ ‘ಅಧಿಪತ್ರ’

Adhipatra - Roopesh Shetty

‘ಬಿಗ್‍ ಬಾಸ್‍’ ಖ್ಯಾತಿಯ ರೂಪೇಶ್‍ ಶೆಟ್ಟಿ ಇದುವರೆಗೂ ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ರೂಪೇಶ್, ಕನ್ನಡ ಚಿತ್ರವೊಂದರಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷವೇ ಪ್ರಾರಂಭವಾಗಿದ್ದ ಈ ಚಿತ್ರ, ಇದೀಗ ಫೆಬ್ರವರಿ 07ರಂದು ಬಿಡುಗಡೆ ಆಗುತ್ತಿದೆ.

ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಹಿನ್ನೆಲೆಯಾಗಿಸಿಕೊಂಡು ‘ಅಧಿಪತ್ರ’ ಚಿತ್ರದ ಕಥೆಯನ್ನು ಹೆಣೆಯಲಾಗಿದೆಯಂತೆ. ಈ ಚಿತ್ರದಲ್ಲಿ ರೂಪೇಶ್‍ ಶೆಟ್ಟಿ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಈಗಾಗಲೇ ‘ಅಧಿಪತ್ರ‘ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ.

’ಅಧಿಪತ್ರ’ ಚಿತ್ರವನ್ನು ಚಯನ್‍ ಶೆಟ್ಟಿ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್‍ ಚಿತ್ರವಾಗಿದ್ದು, ಕರಾವಳಿ ಭಾಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

’ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಿರೂಪಕಿ ಜಾಹ್ನವಿ ಜೋಡಿ ಆಗಿದ್ದಾರೆ. ಮಿಕ್ಕಂತೆ ಎಂ.ಕೆ.ಮಠ, ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

’ಅಧಿಪತ್ರ’ ಚಿತ್ರವನ್ನು ಕೆ.ಆರ್. ಸಿನಿ ಕಂಬೈನ್ಸ್ ಬ್ಯಾನರ್‌ ಅಡಿ ದಿವ್ಯಾ ನಾರಾಯಣ್ ಮುಂತಾದವರು ನಿರ್ಮಿಸುತ್ತಿದ್ದಾರೆ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿದ್ದಾರೆ.

Leave a Reply

Your email address will not be published. Required fields are marked *