ಮುಂದಕ್ಕೆ ಹೋಯ್ತು ‘ಸಂಜು ವೆಡ್ಸ್ ಗೀತಾ 2’; ಈ ವಾರ ಬಿಡುಗಡೆ ಇಲ್ಲ

Sanju Weds Geetha 2

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿದೆ. ಚಿತ್ರದ ಹೊಸ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಸದ್ಯದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಎರಡು ದಿನಗಳ ಹಿಂದೆಯೇ ಚಿತ್ರದ ಬಿಡುಗಡೆ ಅನುಮಾನ ಎಂಬ ಸುದ್ದಿಯೂ ಕೇಳಿಬಂದಿತ್ತು. ಅದಕ್ಕೆ ಕಾರಣ, ಸ್ಟೇ ಆರ್ಡರ್‍ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ನಿರ್ಮಾಪಕರು ಫೈನಾನ್ಶಿಯರ್‌ಗಳ ಬಳಿ ಆರು ಕೋಟಿ ರೂ. ಫೈನಾನ್ಸ್ ಪಡೆದಿದ್ದರಂತೆ. ಚಿತ್ರದ ಬಿಡುಗಡೆಗೂ ಮೊದಲೇ ಹಣವನ್ನು ತೀರಿಸುವುದಾಗಿ ಹೇಳಿದ್ದರಂತೆ. ಆದರೆ, ಬಿಡುಗಡೆಗೂ ಮುನ್ನ ಹಣ ತೀರಿಸುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ, ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಕ್ಕೆ ಬಿಡುಗಡೆ ಮಾಡಬಾರದು ಎಂದು ಹಣ ಹೂಡಿದವರು ಕೋರ್ಟ್ ಮೆಟ್ಟಿಲೇರಿ ಸ್ಟೇ ಆರ್ಡರ್‍ ತಂದರಂತೆ. ಆದ ಕಾರಣ, ಚಿತ್ರ ಅಂದುಕೊಂಡಂತೆ ಬಿಡುಗಡೆಯಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ, ನಿಜಕ್ಕೂ ಏನಾಯಿತು, ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ದೇಶಕ ನಾಗಶೇಖರ್‍ ಆಗಲೀ, ನಿರ್ಮಾಪಕ ಛಲವಾದಿ ಕುಮಾರ್‍ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ಈ ಹಿಂದೆ ಸಹ ಕೆಲವು ಚಿತ್ರಗಳು ಇದೇ ಕಾರಣಗಳಿಗಾಗಿ ಬಿಡುಗಡೆ ಮುಂದಕ್ಕೆ ಹೋಗಿದ್ದೂ ಇದೆ. ಇನ್ನೂ ಕೆಲವು ಚಿತ್ರಗಳು ಬಿಡುಗಡೆಯೇ ಆಗುವುದಿಲ್ಲವೆನ್ನುವಂತಿದ್ದು, ಮಧ್ಯರಾತ್ರಿ ಸಂಧಾನದಲ್ಲಿ ಸಮಸ್ಯೆಗಳು ಬಗೆಹರಿದು, ಕೊನೆಗೆ ಚಿತ್ರ ಬಿಡುಗಡೆಯಾದ ಹಲವು ಉದಾಹರಣೆಗಳು ಇವೆ. ಆದರೆ, ‘ಸಂಜು ವೆಡ್ಸ್ ಗೀತಾ 2’ ಚಿತ್ರ ಅಂದುಕೊಂಡಂತೆಯೇ ಬಿಡುಗಡೆ ಆಗಲಿಲ್ಲ.

‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ಕನ್ನಡದ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರಂತೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಚಿತ್ರ ಸ್ವಿಟ್ಜರ್‍ಲ್ಯಾಂಡ್‍ವರೆಗೂ ಮುಂದುವರೆಯುತ್ತದೆ ಎಂದು ನಾಗಶೇಖರ್‍ ಹೇಳಿಕೊಂಡಿದ್ದಾರೆ.

ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‍ ಸಂಭ್ರಮ್‍ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *