ಸಿಹಿ ಊಟ ಮಾಡಬೇಕಾದರೆ ಮದುವೆ ಆಗಬೇಕೆಂದೇನೂ ಇಲ್ಲ: ರಮ್ಯಾ

‘ಮದುವೆಯಾದರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಅಭಿಮಾನಿಗಳಿಗೆ ಬೇಕಾದರೆ, ಹಾಗೆಯೇ ನಾನು ಸಿಹಿಊಟ ಹಾಕಿಸುತ್ತೇನೆ. ಯಾವಾಗ ಬೇಕಾದರೂ ಸಿಹಿಯೂಟ ಮಾಡಬಹುದು. ಅದಕ್ಕೆ ಮದುವೆ ಆಗಬೇಕೆಂದೇನೂ ಇಲ್ಲ …’ ಹಾಗಂತ ಮೋಹಕ ತಾರೆ ರಮ್ಯಾ ಹೇಳಿದ್ದಾರೆ.

ರಮ್ಯಾ ಇತ್ತೀಚೆಗೆ ತಮ್ಮ ಎಡಗೈಗೆ ಬರಳಿಗೆ ಉಂಗುರ ತೊಟ್ಟಿರುವುದು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ರಮ್ಯಾ ಸದ್ಯದಲ್ಲೇ ಮದುವೆ ಆಗುವ ಸಾಧ್ಯತೆ ಇದೆ, ಅವರು ತಮ್ಮ ಅಭಿಮಾನಿಗಳಿಗೆ ಯಾವಾಗ ಸಿಹಿಊಟ ಹಾಕಿಸುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು ಮಾತನಾಡಿರುವ ಅವರು, ‘ನಾನು ರಿಂಗ್‍ ತೊಟ್ಟರೆ ಯಾಕೆ ಟ್ರೋಲ್‍ ಆಗಬೇಕು? ಯಾವಾಗ ಬೇಕಾದರೂ ಸಿಹಿಯೂಟ ಮಾಡಬಹುದು. ಅದಕ್ಕೆ ಮದುವೆ ಆಗಬೇಕೆಂದೇನೂ ಇಲ್ಲ’ ಎಂದು ರಮ್ಯಾ ಹೇಳಿದ್ದಾರೆ.

ರಮ್ಯಾ ಬಹಳ ದಿನಗಳ ನಂತರ ಗುರುನಂದನ್‍ ನಾಯಕನಾಗಿ ಅಭಿನಯಿಸಿದರುವ ‘ರಾಜು ಜೇಮ್ಸ್ ಬಾಂಡ್‍’ ಚಿತ್ರದ ಪ್ರೀ-ರಿಲೀಸ್‍ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ರಮ್ಯಾ ಹಲವು ವಿಷಯಗಳನ್ನು ಮಾತನಾಡಿದ್ದಾರೆ.

ರಮ್ಯಾ ಇದಕ್ಕೂ ಮೊದಲು ‘ಉತ್ತರಕಾಂಡ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಮುಹೂರ್ತದಲ್ಲೂ ಅವರು ಭಾಗಿಯಾಗಿದ್ದರು. ಆದರೆ, ಚಿತ್ರೀಕರಣ ಪ್ರಾರಂಭವಾಗುವಷ್ಟರಲ್ಲಿ ಅವರು ಚಿತ್ರದಿಂದ ಹೊರನಡೆದಿದ್ದರು. ಸದ್ಯ ಯಾವುದೇ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ರಮ್ಯಾ, ‘ಇದುವರೆಗೂ ಯಾವುದೇ ಆಸಕ್ತಿಕರ ಸ್ಕ್ರಿಪ್ಟ್ ನನಗೆ ಸಿಕ್ಕಿಲ್ಲ. ನನಗೆ ಮಾಡಿದ್ದನ್ನೇ ಇನ್ನೊಮ್ಮೆ ಮಾಡುವುದಕ್ಕೆ ಇಷ್ಟವಿಲ್ಲ. ಯಾವುದಾದರೂ ಒಳ್ಳೆಯ ಪಾತ್ರ ಬಂದರೆ ಖಂಡಿತಾ ಮಾಡುತ್ತೇನೆ’ ಎಂದಿದ್ದಾರೆ.

‘ಸ್ವಾತಿಮುತ್ತಿನ ಮಳೆ ಹನಿಯೇ’ ಚಿತ್ರದ ನಂತರ ಚಿತ್ರ ನಿರ್ಮಾಣದಿಂದ ದೂರವೇ ಉಳಿದಿರುವ ರಮ್ಯಾ, ‘‘ಸ್ವಾತಿಮುತ್ತಿನ ಮಳೆ ಹನಿಯೇ’ ಕಮರ್ಷಿಯಲ್‍ ಆಗಿ ಚಿತ್ರ ಯಶಸ್ವಿಯಾಗಲಿಲ್ಲ. ಆ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸಿರಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಆ ಸಿನಿಮಾ ಮಾಡಿದ್ದಿಕ್ಕೆ ಖುಷಿ ಇದೆ. ಒಂದೊಳ್ಳೆಯ ಸ್ಕ್ರಿಪ್ಟ್ ಸಿಕ್ಕಿದರೆ, ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ’ ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ದರ್ಶನ್ ಬಗ್ಗೆ ಎದುರಾದ ಪ್ರಶ್ನೆಗೆ ರಮ್ಯಾ, ನೋ ಕಾಮೆಂಟ್ಸ್ ಎಂದಷ್ಟೇ ಹೇಳಿದ್ದಾರೆ.

Leave a Reply

Your email address will not be published. Required fields are marked *