Punith Nivasa; ಪುನೀತ್ ನೆನಪಲ್ಲಿ ಮತ್ತೊಂದು ಚಿತ್ರ ‘ಪುನೀತ್ ನಿವಾಸ’ …

- ಪುನೀತ್ ನೆನಪಿನಲ್ಲಿ ಮತ್ತೊಂದು ಚಿತ್ರ ‘ಪುನೀತ್ ನಿವಾಸ’
- ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಾಗೇಂದ್ರ ಪ್ರಸಾದ್
- ರಾಜ್ ಕುಟುಂಬದ ಆಪ್ತ ಗ್ರೀನ್ ಹೌಸ್ ವಾಸುರಿಂದ ಟ್ರೈಲರ್ ರಿಲೀಸ್
ಪುನೀತ್ ರಾಜಕುಮಾರ್ (Puneeth Rajkumar) ನಿಧನದ ನಂತರ ಅವರ ನೆನಪಿನಲ್ಲಿ ‘ರತ್ನ’, ‘ಡ್ಯೂಡ್’, ‘ಅಪ್ಪು ಅಭಿಮಾನಿ’ ಮುಂತಾದ ಚಿತ್ರಗಳು ತಯಾರಿಗಿವೆ. ಈಗ ಆ ಸಾಲಿಗೆ ‘ಪುನೀತ್ ನಿವಾಸ’ (Punith Nivasa) ಎಂಬ ಹೊಸ ಚಿತ್ರ ಸಹ ಸೇರಿದೆ.
ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಎಸ್.ಮೋಹನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು ರಾಜ್ ಕುಟುಂಬದ ಆಪ್ತರಾದ ಗ್ರೀನ್ ಹೌಸ್ ವಾಸು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇದು ಮಲ್ಲು ಎಂಬ ಪುನೀತ್ ಅಭಿಮಾನಿಯ ಕಥೆಯಂಗತೆ. ಒಂದು ಸಿನಿಮಾ ಮಾಡಬೇಕೆಂದು ಹೊರಟ ಆತ ಕೊನೆಗೂ ಆ ಸಿನಿಮಾ ಮಾಡುತ್ತಾನಾ? ಪುನೀತ್‌ರ ಆದರ್ಶಗಳನ್ನು ಆತ ಹೇಗೆ ಪಾಲಿಸುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಭಿಜಿತ್ ಮಾತನಾಡಿ, ‘ಈ ಶೀರ್ಷಿಕೆಗೆ ದೊಡ್ಡ ಪವರ್ ಇದೆ. ಶೀರ್ಷಿಕೆ ಹೇಳಿದಾಗ ನನಗೂ ರೋಮಾಂಚನವಾಗಿ, ಮರುಮಾತಾಡದೆ ಒಪ್ಪಿಕೊಂಡೆ. ನಾನು ಪುನೀತ್ ಅವರ ಜತೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅವರ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕ ಮೋಹನ್ ಅವರು ಪುನೀತ್‌ರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಒಂದು ನಿಜವಾದ ಮನೆಯನ್ನೇ ಕಟ್ಟಿಸಿದ್ದಾರೆ’ ಎಂದು ಹೇಳಿದರು.
ನಿರ್ಮಾಪಕ ಮೋಹನ್ ಮಾತನಾಡಿ, ‘2021ರಲ್ಲಿ ನಾನು ಈ ಶೀರ್ಷಿಕೆ ರಿಜಿಸ್ಟರ್ ಮಾಡಿಸಿದೆ. ಅದಕ್ಕೆ ತಕ್ಕಂತೆ 50 ಕಥೆಗಳನ್ನು ಮಾಡಿದೆ. ಆದರೆ, ಯಾವುದೂ ಸರಿಹೊಂದಲಿಲ್ಲ, ಕೊನೆಗೆ ಈ ಕಥೆಯನ್ನು ಚಿತ್ರರೂಪಕ್ಕೆ ತಂದಿದ್ದೇವೆ. ‘ಪುನೀತ್ ನಿವಾಸ’ದ ಒಳಗೆ ಬಂದಾಗ ಅಲ್ಲಿ ಪುನೀತ್ ಅವರೇ ಕಾಣಿಸುತ್ತಾರೆ. ಸಿನಿಮಾ ಮಾಡಬೇಕೆಂದು ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ ಸಿನಿಮಾವನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೇ ಚಿತ್ರದ ಕಥಾಹಂದರ’ ಎಂದರು.
ಈ ಚಿತ್ರದಲ್ಲಿ ಪುನೀತ್ ಕಾಣಿಸುತ್ತಾರಂತೆ. ‘ಪುನೀತ್ ಅಭಿಮಾನಿಯೊಬ್ಬನ ಕಥೆಯಿದು. ಪುನೀತ್‌ನಿವಾಸದ ಒಳಗೆ ಬಂದಾಗ ಅಲ್ಲಿ ಪುನೀತ್ ಕಾಣಿಸುತ್ತಾರೆ. ಅದು ಹೇಗೆ? ಎಂದು ಚಿತ್ರ ನೋಡಬೇಕು’ ಎಂದರು.
ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ತಾಯಿ ಸೆಂಟಿಮೆಂಟ್ ಹಾಡನನ್ನು ಅಭಿಜಿತ್ ಅವರಿಂದ ಹಾಡಿಸಿದ್ದಾರಂತೆ. ಚಿತ್ರಕ್ಕೆ ಬಾಲು ಛಾಯಾಗ್ರಹಣ, ಜೆಮ್ ಶಿವು ಸಂಭಾಷಣೆ, ಮುತ್ತುರಾಜ್ ಅವರ ಸಂಕಲನವಿದೆ.
ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಅಭಿಜಿತ್, ಶಂಕರ್ ಭಟ್, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಗಣೇಶ್ ರಾವ್ ಕೇಸರಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

One thought on “Punith Nivasa; ಪುನೀತ್ ನೆನಪಲ್ಲಿ ಮತ್ತೊಂದು ಚಿತ್ರ ‘ಪುನೀತ್ ನಿವಾಸ’ …”