Powerstar Dharege Doddavanu; ನೇತ್ರದಾನ ಮಹಾದಾನ ಎಂದು ಸಾರುವ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’

ಪುನೀತ್ ನಿಧನರಾದ ಮೇಲೆ ಅವರ ಅಭಿಮಾನದ ಕುರಿತಾದ ಸಾಕಷ್ಟು ಚಿತ್ರಗಳು ಬರುತ್ತಿವೆ. ಈಗ ಆ ಸಾಲಿಗೆ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’ (Powerstar Dharege Doddavanu) ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ನಿರ್ದೇಶಕ ಶಶಾಂಕ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಚಿತ್ರವನ್ನು ಸೂರ್ಯ ನಿರ್ದೇಶನ ಮಾಡುತ್ತಿದ್ದು, ಅವರು ಇದುವರೆಗೂ ಸುಮಾರು 15 ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರಂತೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ನಿರ್ದೇಶನದ ಚಿತ್ರ ಎಂದು ಮಾತು ಶುರು ಮಾಡಿದ ಅವರು, ‘ನಾನು ಈ ಹಿಂದೆ 2014ರಲ್ಲಿ ಯಶ್ ಅವರಿಗೆ ಒಂದು ಕಥೆ ಮಾಡಿಕೊಂಡಿದ್ದೆ. 50 ಲಕ್ಷ ಖರ್ಚು ಮಾಡಿ ಗ್ರಾಫಿಕ್ಸ್ ಮೂಲಕ ಟೀಸರ್ ಮಾಡಿದ್ದೆವು. ಆದರೆ, ಬೇರೆ ಬೇರೆ ಕಾರಣಗಳಿಂದ ಚಿತ್ರ ಆರಂಭಗೊಳ್ಳಲಿಲ್ಲ. ಆ ಕಥೆಯನ್ನು ಇಟ್ಟುಕೊಂಡು ಒಂದಷ್ಟು ಬದಲಾವಣೆ ಜೊತೆಗೆ ಈಗ ಚಿತ್ರವನ್ನು ಆರಂಭಿಸಿದ್ದೇವೆ’ ಎಂದರು.
‘ಪವರ್ ಸ್ಟಾರ್ ಧರೆಗೆ ದೊಡ್ಡವನು’ ಎಂಬ ಶೀರ್ಷಿಕೆ ಇಟ್ಟಾಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕರೆ ಬಂದಿತ್ತಂತೆ. ಚಿತ್ರದ ಸಾರಾಂಶ ಕೊಡಿ ಎಂದು ಕೇಳಿದ್ದರಂತೆ. ‘ಅದರಂತೆ ನಾವು ಅವರು ಕೇಳಿದ್ದನ್ನ ಕೊಟ್ಟಿದ್ದೇವೆ. ಅವರು ಶೀರ್ಷಿಕೆ ಇಡುವುದಕ್ಕೆ ಒಪ್ಪಿಗೆ ಸೂಚಿಸಿ ಅನುಮತಿ ನೀಡಿದ್ದಾರೆ. ಕಣ್ಣಿಲ್ಲದ ಮಗುವಿಗೆ ದೃಷ್ಟಿ ಬಂದಾಗ ಆಕೆಯ ಆಸೆ ನೆರವೇರಿಸಿಕೊಳ್ಳಲು ಏನೆಲ್ಲಾ ಮಾಡುತ್ತಾಳೆ ಎಂಬುದು ಚಿತ್ರದ ಕಥೆ. ಈ ಚಿತ್ರದಲ್ಲಿ ಶಿಲ್ಪಿಯ ಪಾತ್ರವೊಂದಿದೆ. ಅಯೋಧ್ಯೆಯ ಬಾಲರಾಮನ ವಿಗ್ರಹ ಕೆತ್ತಿದಂತಹ ಮೈಸೂರಿನ ಶಿಲ್ಪಿ ಯೋಗಿರಾಜ್ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದರು.
ಈ ಚಿತ್ರದಲ್ಲಿ ವಿಶೇಷ ತಂತ್ರಜ್ಞಾನದ ಮೂಲಕ ಪುನೀತ್ ರಾಜಕುಮಾರ್ ಅವರನ್‍ನು ಪರದೆಯ ಮೇಲೆ ಸೃಷ್ಟಿ ಮಾಡಲಾಗುವುದಂತೆ. ‘’ಪವರ್ ಸ್ಟಾರ್ ಧರೆಗೆ ದೊಡ್ಡವನು’ ಎಂಬ ಟೈಟಲ್ ಅಭಿಮಾನಿಗಳ ಹೃದಯ ಗೆಲ್ಲುವಂತಹ ಸಾರಾಂಶ ಬೆಸೆದುಕೊಂಡಿದೆ. ಈಗಾಗಲೇ ಈ ಚಿತ್ರದ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಮಾತಿನ ಭಾಗ ಹಾಗೂ ಹಾಡಿನ ಭಾಗ ಚಿತ್ರೀಕರಣ ಮಾಡಬೇಕಿದೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು, ನಮ್ಮ ಚಿತ್ರವನ್ನು ಇದೇ ವರ್ಷ ಅಕ್ಟೋಬರ್ 29ರಂದು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
‘ಸರಿಗಮಪ’ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿರುವ ಬೇಬಿ ಜ್ಞಾನ ಗುರುರಾಜ್ ಈ ಚಿತ್ರದಲ್ಲಿ ಪುನೀತ್ ಅಭಿಮಾನಿಯ ಪಾತ್ರ ಮಾಡುತ್ತಿದ್ದಾರಂತೆ. ಪಾಳ್ಯ ಸಿದ್ದಿ ವಿಲಾಸ್ ಶಿಲ್ಪಿಯ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಹಿರಿಯ ನಟ ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ಭಾಸ್ಕರ್ ಛಾಯಾಗ್ರಾಹಣ, ಅನುಶ್ರೀ ಶ್ರೀಧರ್ ಮೂರ್ತಿ ಸಂಗೀತವಿದೆ.

- Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …
- Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ
- Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
- Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್
- ತುಳು ಭಾಷೆಯ ‘Daskath’, ಈಗ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ
One thought on “Powerstar Dharege Doddavanu; ನೇತ್ರದಾನ ಮಹಾದಾನ ಎಂದು ಸಾರುವ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’”