Pranam Devaraj; ಪ್ರಣಮ್ ಜತೆಗೆ ಪುರಾತನ ಫಿಲಂಸ್ ಮತ್ತೊಂದು ಚಿತ್ರ

ಪ್ರಣಮ್ ದೇವರಾಜ್ (Pranam Devaraj) ನಟನೆಯ ‘S/O ಮುತ್ತಣ್ಣ’ ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಹೀಗಿರುವಾಗಲೇ, ಆ ಚಿತ್ರವನ್ನು ನಿರ್ಮಿಸಿದ್ದ ಪುರಾತನ ಫಿಲಂಸ್ (Purathana Films), ಪ್ರಣಮ್ ಜೊತೆಗೆ ಇನ್ನೊಂದು ಚಿತ್ರವನ್ನು ಘೋಷಿಸಿದೆ.
ಕನ್ನಡ ಚಿತ್ರೋದ್ಯಮದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಶಯ ಇಟ್ಟುಕೊಂಡಿರುವ ಪುರಾತನ ಫಿಲಂಸ್, ಇದೀಗ ‘ಪ್ರೊಡಕ್ಷನ್ ನಂ.2’ ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲೂ ಸಹ ಪ್ರಣಮ್ ದೇವರಾಜ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ‘S/O ಮುತ್ತಣ್ಣ’ ಚಿತ್ರವನ್ನು ನಿರ್ದೇಶನ ಮಾಡಿರುವ ಶ್ರೀಕಾಂತ್ ಹುಣಸೂರು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಮೊದಲ ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕಥೆ ಹೇಳಿದ್ದ ನಿರ್ದೇಶಕ ಶ್ರೀಕಾಂತ್ ಹುಣಸೂರು, ಈ ಚಿತ್ರದ ಮೂಲಕ ಸಾಹಸಮಯ ಪ್ರೇಮ ಕಥೆಯೊಂದನ್ನು ಹೇಳಹೊರಟಿದ್ದಾರೆ. ಪ್ರಣಮ್ ದೇವರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಪ್ರಣಮ್ – ಶ್ರೀಕಾಂತ್ ಜೋಡಿಯ ಹೊಸ ಚಿತ್ರ ಘೋಷಿಸಲಾಗಿದ್ದು, ಇದೇ ಮಾರ್ಚ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತದಂತೆ.
‘S/O ಮುತ್ತಣ್ಣ’ ಚಿತ್ರದಲ್ಲಿ ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಖುಷಿ ರವಿ ಅಭಿನಯಿಸಿದ್ದು, ಮಿಕ್ಕಂತೆ ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತವಿದೆ.
(S/O Muthanna, starring Pranam Devaraj, is nearing completion, and the film is set to release soon. Meanwhile, the production house Purathana Films, which produced this movie, has announced another film with Pranam.)