ಇದು ಕುರ್ಚಿಯ ಕುರಿತಾದ ಟೀಸರ್; ‘ಕರಾವಳಿ’ಯಿಂದ ಬಂತು ‘ಪಿಶಾಚಿ’

Prajwal Devaraj


ಸಾಮಾನ್ಯವಾಗಿ ಟೀಸರ್‍ಗಳು ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ, ‘ಕರಾವಳಿ’ ಚಿತ್ರತಂಡದವರು ಒಂದು ಕುರ್ಚಿಯ ಕುರಿತು ಟೀಸರ್‍ ಮಾಡಿದ್ದಾರೆ. ಕುರ್ಚಿ ಎಂದರೆ ಇದು ಸಾಮಾನ್ಯ ಕುರ್ಚಿಯಲ್ಲ. ಇದನ್ನು ಚಿತ್ರತಂಡದವರು ಪಿಶಾಚಿಗೆ ಹೋಲಿಸಿದ್ದಾರೆ.

ಇತ್ತೀಚೆಗೆ, ಹೊಸ ವರ್ಷದ ಸಂದರ್ಭದಲ್ಲಿ ಈ ‘ಪಿಶಾಚಿ’ಯ ಕುರಿತು ‘ಕರಾವಳಿ’ ಚಿತ್ರತಂಡ ಒಂದು ಹೊಸ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದು ಬರಿ ಕುರ್ಚಿಯಲ್ಲ, ಪ್ರತಿಷ್ಠೆಯ ಪಿಚಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತದೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ, ಕಣ್ಣಿಟ್ಟವರನ್ನು ಬಿಡಲ್ಲ ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಗಮನಸೆಳೆಯುತ್ತಿದೆ.

‘ಕರಾವಳಿ’, ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಕಂಬಳ ಪ್ರಮುಖ ಪಾತ್ರ ವಹಿಸುತ್ತದಂತೆ. ಪ್ರಾಣಿಗಳಲ್ಲಿರುವ ಮನುಷ್ಯತ್ವದ ಕುರಿತು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆಯಂತೆ.

ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಧನಂಜಯ ಎಂಬ ಪಾತ್ರ ಮಾಡುತ್ತಿದ್ದು, ಇದುವರೆಗೂ ಅವರ ಮೂರು ರೀತಿಯ ಲುಕ್ ಅನಾವರಣವಾಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ ಮೂರು ವಿಭಿನ್ನ ಶೈಲಿಯ ಗೆಟಪ್‍ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ? ಅಥವಾ ಕಂಬಳ ಕೊಡಿಸುವವನಾ? ಎಂಬ ಕುತೂಹಲ ಹೆಚ್ಚಾಗಿದೆ.

‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸುತ್ತಿದ್ದಾರೆ. ಮಿಕ್ಕಂತೆ ಮಿತ್ರ, ರಮೇಶ್‍ ಇಂದಿರಾ, ಎಂ.ಕೆ. ಮಠ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇದೇ ವರ್ಷ ಚಿತ್ರ ಬಿಡುಗಡೆ ಆಗಲಿದೆ.

‘ಕರಾವಳಿ’ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ಕಥೆ ಬರೆದಿದ್ದು, ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *