Firefly; ಡಾ. ರಾಜಕುಮಾರ್ ಹುಟ್ಟುಹಬ್ಬಕ್ಕೆ ಮೊಮ್ಮಗಳ ಗಿಫ್ಟ್; ಏ. 24ಕ್ಕೆ ‘ಫೈರ್ ಫ್ಲೈ’ ಬಿಡುಗಡೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಡಾ. ರಾಜಕುಮಾರ್ ಮೊಮ್ಮಗಳು ಮತ್ತು ಶಿವರಾಜಕುಮಾರ್ ಮಗಳು ನಿವೇದಿತಾ ನಿರ್ಮಾಣದ ಮೊದಲ ಚಿತ್ರ ‘ಫೈರ್ ಫ್ಲೈ’ (Firefly) ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು. ದೀಪಾವಳಿಗೆ ಚಿತ್ರ ಬಿಡುಗಡೆ ಎಂದು ಘೋಷಣೆಯೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ. ಈಗ ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದ್ದು, ಏಪ್ರಿಲ್‍ 24ರಂದು ಬಿಡುಗಡೆಯಾಗುತ್ತಿದೆ. ತಾತನ ಹುಟ್ಟುಹಬ್ಬದಂದು ಚಿತ್ರ ಬಿಡುಗಡೆ ಮಾಡಲು ಮೊಮ್ಮಗಳು ನಿರ್ಧರಿಸಿದ್ದಾರೆ.

ನಿವೇದಿತಾ ತಮ್ಮ ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ಫೈರ್ ಫ್ಲೈ’ ಚಿತ್ರಕ್ಕೆ ವಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ವಂಶಿಗೆ ನಾಯಕಿಯಾಗಿ ರಚನಾ ಇಂದರ್‌ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಅಂತಿಮ ಹಂತದಲ್ಲಿದೆ.

ತಮ್ಮ ಮಗಳು ನಿರ್ಮಿಸುತ್ತಿರುವ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಶಿವರಾಜಕುಮಾರ್‍, ‘ಅಪ್ಪಾಜಿಯವರ ಹುಟ್ಟುಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ‘ಫೈರ್ ಫ್ಲೈ’ ಚಿತ್ರವು ಜೀವನ ಸ್ಫೂರ್ತಿಯ ಕುರಿತಾದ ಚಿತ್ರ. ಒಂದು ಗಾಢವಾದ ವಿಷಯವನ್ನು ಸರಳವಾಗಿ ಮತ್ತು ಹಾಸ್ಯದ ಮೂಲಕ ಹೇಳಲಾಗಿದೆ. ಎಲ್ಲರೂ ಈ ಚಿತ್ರವನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆʼ ಎಂದು ಹೇಳಿದ್ದಾರೆ.

‘ಫೈರ್ ಫ್ಲೈ’ ಚಿತ್ರಕ್ಕೆ ಚರಣ್‍ ರಾಜ್‍ ಸಂಗೀತ, ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಇದೆ. ಚಿತ್ರದಲ್ಲಿ ವಂಶಿ ಜೊತೆಗೆ ಆಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಮುಂತದವರು ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *