Vaghachipani; ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ವಾಘಚಿಪಾಣಿ’ ಆಯ್ಕೆ; ಕನ್ನಡಕ್ಕೆ ಇದೇ ಮೊದಲು

ಬೆಂಗಳೂರು: 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ‘ವಾಘಚಿಪಾಣಿ’ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ ‘ವಾಘಚಿಪಾಣಿ’ ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ.
ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ. ‘ವಾಘಚಿಪಾನಿ’ ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಮೊದಲ ಚಲನಚಿತ್ರ, ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಪೆಡ್ರೋವನ್ನು ರಿಷಭ್ ಶೆಟ್ಟಿ ನಿರ್ಮಿಸಿದ್ದರು.

ರಿಷಬ್ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ಕೂಡ ಪ್ರಾರಂಭಗೊಂಡಿತ್ತು. ‘ರಿಷಬ್ ಶೆಟ್ಟಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಅವರು ‘ಕಾಂತಾರ’ ಚಿತ್ರೀಕರಣದಲ್ಲಿ ಮಗ್ನರಾಗಿರುವುದರಿಂದ ಇದಕ್ಕೆ ಸಮಯ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಚಿತ್ರವನ್ನು ಅನುರಾಗ್ ಕಶ್ಯಪ್ ಖರೀದಿಸಿದರು. ಮಲಯಾಳದ ನಟ, ನಿರ್ದೇಶಕ ದಿಲೀಶ್ ಪೋತನ್ ಪ್ರಮುಖ ಪಾತ್ರದಲ್ಲಿದ್ದಾರೆ’ ಎಂದು ನಿರ್ದೇಶಕ ನಟೇಶ್ ಹೆಗ್ಡೆ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಒಂದು ಹಳ್ಳಿಯಿಂದ ಬಂದಿದ್ದೇನೆ, ಅದು ಗೂಗಲ್ ಮ್ಯಾಪ್‌ನಲ್ಲಿಯೂ ಸಹ ನೀವು ಪತ್ತೆಹಚ್ಚಲು ಸಾಧ್ಯವಿಲ್ಲ. ಈಗಲೂ ಅಲ್ಲಿಯೇ ವಾಸಿಸುತ್ತಿದ್ದೇನೆ. ಹೀಗಾಗಿ ನನ್ನದೇ ಆದ ಪರಿಸರ ವ್ಯವಸ್ಥೆಯನ್ನು ರಚಿಸಿಕೊಳ್ಳಬೇಕಾಯಿತು ಎಂದು ಹೆಗ್ಡೆ ಕಥನ ಪರಿಸರದ ಬಗ್ಗೆ ಹೇಳಿದರು.
ಅಮರೇಶ್ ನುಗಡೋಣಿ ಅವರ ದಲಿತ ಮಹಿಳೆ ಕುರಿತಾದ ಕಥೆ ಈ ಚಿತ್ರಕ್ಕಿದೆ. ಶಿರಸಿ ಸುತ್ತಮುತ್ತಲು ಚಿತ್ರೀಕರಣಗೊಂಡಿದೆ. ಅಚ್ಯುತ್ ಕುಮಾರ್, ನಟೇಶ್, ಗೋಪಾಲ್ ಹೆಗಡೆ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.