Muddu Rakshasi; ‘ಮುದ್ದು ರಾಕ್ಷಸಿ’ ಕಣ್ಣೀರು ಹಾಕಿದಾಗ; ಜೊತೆಗೆ ಕಾಣಿಸಿಕೊಂಡ ಚಂದನ್, ನಿವೇದಿತಾ

ಚಂದನ್‍ ಶೆಟ್ಟಿ ಮತ್ತು ನಿವೇದಿತಾ ಜೋಡಿ ಒಟ್ಟಿಗೆ ಇದ್ದ ಕಾಲದಲ್ಲಿ ಅವರಿಬ್ಬರೂ ನಾಯಕ-ನಾಯಕಿಯಾಗಿ ‘ಮುದ್ದು ರಾಕ್ಷಸಿ’ (Muddu Rakshasi) ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ವಿಚ್ಛೇದನ ಪಡೆದಿದ್ದಾಗಿದೆ. ಕಾರಣಾಂತರಗಳಿಂದ ತಡವಾದ ಚಿತ್ರ, ಇದೀಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಇತ್ತೀಚೆಗೆ ಅಂಜನಾಪುರದಲ್ಲಿರುವ ವಜ್ರಮುನಿ ಎಸ್ಟೇಟ್‍ನಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಚಂದನ್‍ ಮತ್ತು ನಿವೇದಿತಾ ಇಬ್ಬರೂ ವಿದಾಯ ಹೇಳುವ ಸನ್ನಿವೇಶವನ್ನು ನಿರ್ದೇಶಕ ಪುನೀತ್ ಶ್ರೀನಿವಾಸ್‍ ಚಿತ್ರೀಕರಿಸಿಕೊಂಡರು. ವಿಚ್ಛೇದನ ನಂತರ ಮೊದಲ ಬಾರಿಗೆ ಚಂದನ್, ನಿವೇದಿತಾ ಮುಖಾಮುಖಿಯಾದರು. ಈ ಸಂದರ್ಭದಲ್ಲಿ ಗ್ಲಿಸರಿನ್ ಹಾಕದಿದ್ದರೂ ನಿವೇದಿತಾ ಕಣ್ಣಂಚಲ್ಲಿ ನೀರು ತುಂಬಿಬಂದಿತ್ತು. ಇದರೊಂದಿಗೆ ಮುದ್ದುರಾಕ್ಷಸಿ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿವೇದಿತಾ, ‘ಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ದೃಶ್ಯವೂ ಅದೇ ತರಹ ಇದೆ. ನಮ್ಮಿಬ್ಬರಲ್ಲೂ ಒಂದೊಳ್ಳೆಯ ಬಂಧವಿತ್ತು. ಹಾಗಾಗಿ, ಸಹಜವಾಗಿಯೇ ಅಳು ಬಂತು’ ಎಂದು ಹೇಳಿದರು.

‘ಮುದ್ದು ರಾಕ್ಷಸಿ’ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದ ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಎ. ಕರುಣಾಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *