KVN Production: ಮಲಯಾಳಂ ಚಿತ್ರರಂಗಕ್ಕೆ ಹೊರಟ ಕೆವಿಎನ್ ಪ್ರೊಡಕ್ಷನ್ಸ್

ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ಕಳೆದ ವರ್ಷ ವಿಜಯ್ ಚಿತ್ರವನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿತ್ತು. ಇದೀಗ ಸಂಸ್ಥೆಯು ಮಲಯಾಳಂ ಚಿತ್ರವನ್ನು ನಿರ್ಮಿಸುವ ಮೂಲಕ ಮಾಲಿವುಡ್ಗೆ ಕಾಲಿಟ್ಟಿದೆ.
ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಲಯಾಳಂನ ತೆಸ್ಪಿಯನ್ ಫಿಲ್ಮ್ಸ್ ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿವೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಅತ್ಯಂತ ಯಶಸ್ವಿ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಿಸಿದ್ದು, ಇದೇ ಚಿದಂಬರಂ. ಇನ್ನು, ‘ರೋಮಾಂಚನಂ’, ‘ಆವೇಶಂ’ ಮುಂತಾದ ಚಿತ್ರಗಳಿಗೆ ಕಥೆ ಬರೆದಿರುವ ಜೀತು ಮಾಧವನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಈ ಕುರಿತು ಮಾತನಾಡುವ ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ್ ಕೆ ನಾರಾಯಣ ಅವರು ಮಾತನಾಡಿ, ’ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ನೀಡಲು ಮುಂದಾಗಿದ್ದೇವೆ. ಅದರಂತೆ ಹೊಸ ಚಿಂತನೆ ಇರುವ ನಿರ್ದೇಶಕರ ಮೂಲಕ ಪ್ರೇಕ್ಷಕರನ್ನು ತಲುಪುವತ್ತ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಯತ್ನದಲ್ಲಿ ಇದೀಗ ಮಲಯಾಳಂನಲ್ಲಿ ಚಿತ್ರರಂಗಕ್ಕೆ ಕಾಲಿಡುವುದರ ಜೊತೆಗೆ, ಮಲಯಾಳಂನ ನಮ್ಮ ಮೊದಲ ಚಿತ್ರಕ್ಕಾಗಿ ಚಿದಂಬರಂ ಅವರ ಜೊತೆಗೆ ಕೈಜೋಡಿಸಿದ್ದೇವೆ’ ಎನ್ನುತ್ತಾರೆ.
ಈ ಚಿತ್ರದ ಹೆಸರೇನು? ಯಾರೆಲ್ಲಾ ನಟಿಸುತ್ತಿದ್ದಾರೆ? ಎಂಬಂತ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು, ತಾಯಿಯೊಬ್ಬಳು ನಗರದತ್ತ ನಡೆದು ಹೋಗುತ್ತಿರುವುದು ಮತ್ತು ಆಕೆಯನ್ನು ಅವಳ ಮಗ ನೋಡುತ್ತಿರುವ ದೃಶ್ಯವಿದೆ. ಇದೊಂದು ತಾಯಿ-ಮಗನ ಕುರಿತಾದ ಚಿತ್ರವಿರಬಹುದು ಎಂದು ಮೇಲ್ನೋಟಕ್ಕೆ ಅನಿಸುವಂತಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್’, ‘ದಳಪತಿ 69’, ‘ಕೆಡಿ – ದಿ ಡೆವಿಲ್’ ಚಿತ್ರಗಳು ಬಿಡುಗಡೆಯಾಗುವುದಕ್ಕಿದೆ. ಅದರ ಜೊತೆಗೆ ಈ ಮಲಯಾಳಂ ಚಿತ್ರವೂ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಇನ್ನು, ಪ್ರಿಯದರ್ಶನ್ ನಿರ್ದೇಶನದಲ್ಲಿ ಸಂಸ್ಥೆಯು ಸದ್ಯದಲ್ಲೇ ಹಿಂದಿಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಮೊದಲ ಹಿಂದಿ ಚಿತ್ರವಾಗಿರಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮೊದಲ ಮಲಯಾಳಂ ಚಿತ್ರಕ್ಕೆ ಶೈಜು ಖಾಲೆದ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತವಿದೆ.