Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

ಕೆಲವು ವರ್ಷಗಳ ಹಿಂದೆ ‘ಕೃಷ್ಣ ಲೀಲಾ’ (Krishna Leela) ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದರು ಅಜೇಯ್ ರಾವ್ (Krishna Ajai Rao). ಆ ಚಿತ್ರದ ನಂತರ ಅವರು ಇದೀಗ ‘ಯುದ್ಧಕಾಂಡ’ (Yuddhakaanda) ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ಬಿಡಗುಡೆಯಾಗುತ್ತಿದೆ.

‘ಯುದ್ಧಕಾಂಡ’ ಎಂಬ ಹೆಸರು ಕೇಳುತ್ತಿದ್ದಂತೆಯೇ ರವಿಚಂದ್ರನ್‍ ಅಭಿನಯದ ಅದೇ ಹೆಸರಿನ ಕುರಿತಾದ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈ ‘ಯುದ್ಧಕಾಂಡ’ ಸಹ ಅದೇ ತರಹದ ಒಂದು ಕಥೆ. ಇಲ್ಲಿ ಹೆಣ್ಣಿನ ಮೇಲಿನ ಶೋಷಣೆಯ ವಿರುದ್ಧ ಅಜೇಯ್‍ ಹೋರಾಟ ನಡೆಸಿದ್ದು, ಚಿತ್ರ ರಾಷ್ಟ್ರಪತಿಗಳಿಗೂ ತಲುಪಬೇಕು ಎನ್ನುವುದು ತನ್ನ ಉದ್ದೇಶ ಎನ್ನುತ್ತಾರೆ.

ಈ ಕಥೆ ಕೇಳಿದಾಗ ಅಜೇಯ್‍ ಕಣ್ಣ ಮುಂದೆ ಅವರ ಮಗಳು ಬಂದಳಂತೆ. ‘ನನಗೂ ಒಬ್ಬ ಮಗಳಿದ್ದಾಳೆ ಎನ್ನುವ ಒಂದೇ ಕಾರಣದಿಂದ ಈ ಚಿತ್ರ ಮಾಡಿದೆ. ಈ ಪರಿಸ್ಥಿತಿ ನನ್ನ ಮನೆಯಲ್ಲಿ ನನ್ನ ಮಗಳಿಗಾದರೆ, ನಾನೇನು ಮಾಡಬಹುದು? ಯಾವ ರೀತಿ ಹೋರಾಟ ಮಾಡಬಹುದು? ಈ ವಿಷಯ ಮಾತಾಡಬೇಕಾದರೆ ಭಾವುಕನಾಗುತ್ತೇನೆ. ಏಕೆಂದರೆ, ಈ ವಿಷಯದಲ್ಲಿ ಅಷ್ಟೊಂದು ಕಿಚ್ಚಿದೆ. ಈ ಕಥೆ ಕೇಳಿದಾಗಲೆಲ್ಲಾ ಸಾಕಷ್ಟು ನೋವಾಗಿದೆ, ಸಾಕಷ್ಟು ಅತ್ತಿದ್ದೇನೆ. ಅದಕ್ಕೆ ಕಾರಣ ನನ್ನ ಮಗಳು’ ಎನ್ನುತ್ತಾರೆ ಅವರು.

ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟಲು ಕಾನೂನು ಬೇಕು ಎನ್ನುವ ಅಜೇಯ್‍, ‘ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದಾಗ ತಪ್ಪು ಮಾಡಿದವರಿಗೆ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ? ಈ ತರಹದ ತಪ್ಪುಗಳು ಆಗದಿರುವುದಕ್ಕೆ ಏನು ಮಾಡುತ್ತೀರಿ? ಬೇರೆ ಎಲ್ಲದಕ್ಕೂ ಮುಂಜಾಗ್ರತೆ ಇದೆ. ಆದರೆ, ಹೆಣ್ಣಿನ ವಿಷಯದಲ್ಲಿ ಯಾವುದೇ ಮುಂಜಾಗ್ರತೆ ಇಲ್ಲ. ಈ ಚಿತ್ರದ ಮೂಲಕ ನಮ್ಮ ಸಲಹೆ, ಅಭಿಪ್ರಾಯ ಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ.

ನ್ಯಾಯ ಸಿಗದಿರುವುದು ಸಹ ಒಂದು ಅನ್ಯಾಯ ಎನ್ನುವ ಅಜೇಯ್‍, ‘ಒಂದು ಪ್ರಕರಣ ಸ್ವಲ್ಪ ಹಳೆಯದಾಗುತ್ತಿದ್ದಂತೆಯೇ ಮರೆತು ಹೋಗಿಬಿಡುತ್ತದೆ. ನಿರಂತರವಾಗಿ ಆ ಹೋರಾಟ ನಡೆಯುತ್ತಲೇ ಇರಬೇಕು. ನಾವು ವೇಗವಾಗಿ ಹೋಗುವಾಗ, ರಸ್ತೆಯಲ್ಲಿ ಒಂದು ಸ್ಪೀಡ್‍ ಬ್ರೇಕರ್‍ ಸಿಗುತ್ತದೆ. ನಾವು ವೇಗವಾಗಿ ಹೋಗುತ್ತಿದ್ದೇವೆ ಎಂದು ಅದು ಜ್ಞಾಪಿಸುತ್ತದೆ. ನಮ್ಮ ಸಿನಿಮಾ ಮೂಲಕ ಕೆಲವರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ ಎಂದು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಪ್ರಚಾರ ತೆಗೆದುಕೊಳ್ಳಬೇಕು ಎಂಬ ಆಸೆ ಇಲ್ಲ. ಸಿನಿಮಾ ಮೂಲಕ ಧ್ವನಿ ಎತ್ತವ ಪ್ರಯತ್ನ ಇದು’ ಎನ್ನುತ್ತಾರೆ ಅವರು.

‘ಯುದ್ಧಕಾಂಡ’ ಚಿತ್ರದಲ್ಲಿ ಅಜೇಯ್‍ ರಾವ್,‍ ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್.‍ ನಾಗಾಭರಣ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪವನ್‍ ಭಟ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

One thought on “Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

Leave a Reply

Your email address will not be published. Required fields are marked *

Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..