Kiccha Sudeep; ಇದೇ ನನ್ನ ಕೊನೆಯ ಗ್ರಾಂಡ್ ಫಿನಾಲೆ: ವಿದಾಯದ ಪೋಸ್ಟ್ ಹಾಕಿದ ಸುದೀಪ್

ಕನ್ನಡ ‘ಬಿಸ್ ಬಾಸ್’ ಕಾರ್ಯಕ್ರಮದ ಕಳೆದ 11 ಸೀಸನ್‍ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುದೀಪ್, ಮುಂದಿನ ವರ್ಷದಿಂದ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜನವರಿ 25 ಮತ್ತು ಜನವರಿ 26 ರಂದು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯಲಿದ್ದು, ಇದು ತಾವು ನಡೆಸಿಕೊಡುತ್ತಿರುವ ಕೊನೆಯ ಗ್ರಾಂಡ್ ಫಿನಾಲೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸೋಮವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸುದೀಪ್, ‘ಕಳೆದ 11 ಸೀಸನ್‍ಗಳ ಕಾಲ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು. ಬರುವ ಗ್ರಾಂಡ್ ಫಿನಾಲೆ, ನನ್ನ ಕೊನೆಯ ಕಾರ್ಯಕ್ರಮವಾಗಿದ್ದು, ಸಾಧ್ಯವಾದಷ್ಟೂ ಮನರಂಜಿಸುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.
ಈ ಬಾರಿಯ 11ನೇ ಅವತರಣಿಕೆಯನ್ನೇ ಸುದೀಪ್ ನಡೆಸಿಕೊಡುತ್ತಾರೋ? ಇಲ್ಲವೋ? ಎಂಬ ಸಂಶಯವಿತ್ತು. ಅದರೆ, ಕಲರ್ಸ್ ಕನ್ನಡದವರ ಒತ್ತಾಯದ ಮೇರೆಗೆ ಸುದೀಪ್ ಕೊನೆಗೂ ಕಾರ್ಯಕ್‍ರಮವನ್ನು ನಡೆಸಿಕೊಡುವುದಕ್ಕೆ ಮುಂದಾದರು. ಕಾರ್ಯಕ್ರಮ ಶುರುವಾಗಿ ಕೆಲವೇ ದಿನಗಳಲ್ಲಿ ಅವರು ಇದು ತಮ್ಮ ಕೊನೆಯ ಕಾರ್ಯಕ್ರಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.
ಅಕ್ಟೋಬರ್ 13ರಂದು ಈ ಕುರಿತು ಬರೆದುಕೊಂಡಿದ್ದ ಅವರು, ‘ಕಳೆದ 10 + 1 ವರ್ಷಗಳಿಂದ ‘ಬಿಗ್ ಬಾಸ್’ ನಡೆಸಿಕೊಡುತ್ತಿದ್ದು, ಇದು ಮುಂದುವರೆಯುವುದಕ್ಕೆ ಸಕಾಲ. ನಿರೂಪಕನಾಗಿ ಇದು ನನ್ನ ಕೊನೆಯ ವರ್ಷವಾಗಿದ್ದು, ಈ ನನ್ನ ನಿರ್ಧಾರವನ್ನು ಎಲ್ಲರೂ ಒಪ್ಪುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ನಂಬಿದ್ದೇನೆ. ನನ್ನ ಶಕ್ತಿ ಮೀರಿ ಈ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದರು.
ಸುದೀಪ್ ಅವರು ತಮ್ಮ ನಿರ್ಧಾರವನ್‍ನು ಹೇಳಿದ್ದರೂ, ಕಲರ್ಸ್ ಕನ್ನಡದವರು ಒಪ್ಪಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಇದೀಗ ಈ ಬಾರಿಯ ಗ್ರಾಂಡ್ ಫಿನಾಲೆ ತಮ್ಮ ಕೊನೆಯದ್ದು ಎಂದು ಹೇಳುವ ಮೂಲಕ ಸುದೀಪ್ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ.