Sanchith Sanjeev; ಕೊನೆಗೂ ಶುರುವಾಯ್ತು ಸುದೀಪ್ ಸೋದರಳಿಯನ ಚಿತ್ರ

ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಲಿಯಾಸ್ ಸಂಚಿ ಅಭಿನಯದಲ್ಲಿ ಎರಡೂವರೆ ವರ್ಷಗಳ ಹಿಂದೆ ‘ಜಿಮ್ಮಿ’ ಎಂಬ ಚಿತ್ರ ಘೋಷಣೆಯಾಗಿತ್ತು. ಚಿತ್ರದಲ್ಲಿ ಸಂಚಿ ಹೀರೋ ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಚಿತ್ರರಂಗಕ್ಕೆ ಪರಿಚಿತರಾಗಬೇಕಿತ್ತು. ಆದರೆ, ಕಾರಣಾಣಂತರಗಳಿಂದ ಚಿತ್ರ ಶುರುವಾಗಲೇ ಇಲ್ಲ.
ಈಗ ಸಂಚಿ ಇನ್ನೊಂದು ಚಿತ್ರದ ಮೂಲಕ ಹೀರೋ ಆಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಚಿತ್ರದ ಮುಹೂರ್ತವಾಗಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮರಾ ಆನ್ ಮಾಡಿ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುದೀಪ್ ಅವರ ಇಡೀ ಕುಟುಂಬ ಹಾಜರಿದ್ದು, ಸಂಚಿಗೆ ಶುಭ ಕೋರಿತು.
ಈ ಚಿತ್ರವನ್ನು ಸುದೀಪ್ (Kiccha Sudeep) ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ (Supriyanvi Picture Studio) ಮತ್ತು KRG Studios ಜೊತೆಯಾಗಿ ನಿರ್ಮಿಸುತ್ತಿದೆ. ಸದ್ಯ ಚಿತ್ರ ಮುಹೂರ್ತವಾಗಿದ್ದು, ಶೀರ್ಷಿಕೆ ಮತ್ತು ಮೊದಲ ನೋಟ ಫೆಬ್ರವರಿ 05ಕ್ಕೆ ಬಿಡುಗಡೆಯಾಗಲಿದೆ. ಅಂದು ಸಂಚಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ.
ಸಂಚಿ ಮೊದಲ ಚಿತ್ರವನ್ನು ಮೈಸೂರಿನ ವಿವೇಕ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ವಿವೇಕ, ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿವೇಕ, ‘ಇದು ಮೈಸೂರು ಮೂಲದ ಕಥೆ. 2001ರಿಂದ 2011ರವರೆಗೂ ನಡೆಯುವ ಕಥೆಯಾಗಿದೆ. ಈ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ’ ಎಂದರು.
ನಾಯಕ ಸಂಚಿ ಮಾತನಾಡಿ,’ಈ ಚಿತ್ರಕ್ಕೆ ನಾನು ನಾಯಕನಾಗುತ್ತಿರುವುದಕ್ಕೆ ಧನಂಜಯ್ ಕಾರಣ. ಈ ಸಿನಿಮಾಗೆ ನನ್ನ ಹೆಸರನ್ನು ಸೂಚಿಸಿದ್ದೇ ಅವರು. ಬಳಿಕ ಕಾರ್ತಿಕ್ ಮತ್ತು ಯೋಗಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ’ ಎಂದರು.
ಈ ಚಿತ್ರದಲ್ಲಿ ಸಂಚಿಗೆ ನಾಯಕಿಯಾಗಿ ‘ಪೆಪೆ’ ಚಿತ್ರ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಾಹಣವಿದೆ.



(Kiccha Sudeep’s nephew Sanchith Sanjeev to make acting debut as Sanchi. Ashwini Puneeth Rajkumar supported for Sanchith 01. )