ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಸುದೀಪ್? ಹೀಗೊಂದು ಗುಸುಗುಸು …

‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ‘ಸೆಟ್ ಆಗೋಲ್ಲ ಕಣೆ ನಂಗೂ ನಿಂಗೂ…’ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ, ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿ ಬರುತ್ತಿದೆ. ಅದೇನೆಂದರೆ, ನಟ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮುಂತಾದವರು ನಟಿಸಿದ್ದಾರೆ. ಈಗ ಬಂದಿರುವ ಸುದ್ದಿಯ ಪ್ರಕಾರ ಚಿತ್ರದಲ್ಲಿ ಸುದೀಪ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ಸುದೀಪ್ ಮತ್ತು ಪ್ರೇಮ್ ಅವರದ್ದು ಬಹುವರ್ಷಗಳ ಸ್ನೇಹ. ಇದಕ್ಕೂ ಮೊದಲು ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಮತ್ತು ಶಿವರಾಜಕುಮಾರ್ ಜೊತೆಯಾಗಿ ನಟಿಸಿದ್ದರು. ಇದಲ್ಲದೆ ಪ್ರೇಮ್ ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಆದರೆ, ಚಿತ್ರ ಇದುವರೆಗೂ ಸೆಟ್ಟೇರಿಲ್ಲ.
ಹೀಗಿರುವಾಗಲೇ, ‘ಕೆಡಿ’ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ಸುದ್ದಿ ಬಂದಿದೆ. ನಿಜಕ್ಕೂ ಸುದೀಪ್ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಅಥವಾ ಇದು ಬರೀ ಗಾಳಿಸುದ್ದಿಯಾ? ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಪ್ರೇಮ್ ಆಗಲೀ, ಸುದೀಪ್ ಕಡೆಯಿಂದಾಗಲೀ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ:-

ಹೀರೋ ಆದ Siddu Moolimani; ’ಸೀಟ್ ಎಡ್ಜ್’ನಿಂದ ಹೊರಬಂತು ಹೊಸ ಹಾಡು …