ನಾನ್ಯಾಕೆ ದರ್ಶನ್‌ಗೆ ಟಾಂಟ್ ಕೊಡಲಿ? ಸುದೀಪ್ ಪ್ರಶ್ನೆ …

‘ಮ್ಯಾಕ್ಸ್’ ಚಿತ್ರದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೇಕ್ ಮೇಲೆ ‘Bossism ಕಾಲ ಮುಗೀತು, Maximum ಕಾಲ ಶುರುವಾಯ್ತು’ ಎಂಬ ಬರಹ ಸಾಕಷ್ಟು ಸುದ್ದಿ ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಎಂದು ದರ್ಶನ್‍ಗೆ ಕರೆಯುವುದರಿಂದ, ಹೀಗೆ ಬರೆಸುವ ಮೂಲಕ ಸುದೀಪ್, ದರ್ಶನ್ ಕಾಲೆಳೆಯುತ್ತಿದ್ದಾರೆ, ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಈ ಬಗ್ಗೆ ಮೌನ ಮುರಿದಿರುವ ಸುದೀಪ್, ತಾವ್ಯಾಕೆ ದರ್ಶನ್‍ಗೆ ಟಾಂಟ್ ಕೊಡಲಿ? ಅದರಿಂದ ತನಗೆ ಏನು ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ನಡೆದ ‘ಮ್ಯಾಕ್ಸ್’ ಚಿತ್ರದ ಸಂತೋಟಕೂಟದಲ್ಲಿ ಮಾತನಾಡಿದ ಸುದೀಪ್, ‘ನನ್ನ ಹುಡುಗನೊಬ್ಬ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುತ್ತಾನೆ. ಚಿತ್ರ ನೋಡಿ ಬಂದು, ‘ಇವತ್ತಿನಿಂದ ಕಿಚ್ಚ ಬಾಸ್ ಅಂತ ಕರೆಯೋದು ನಿಲ್ಲಿಸಿ, ಕಿಚ್ಚ ಮಾಸ್ ಅಂತ ಕರೆಯಿರಿ’ ಎಂದು ಹೇಳಿದ. ಅದನ್ನೇ ಕೇಕ್ ಮೇಲೆ ಬರೆಸಿ ತಂದರು. ಅದನ್ನು ನೋಡಿದ ಒಂದು ವಾಹಿನಿಯವರು, ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ?’ ಎಂದು ಸುದ್ದಿ ಮಾಡಿದರು. ನಮಗೆ ಟಾಂಟ್ ಕೊಡುವ ಯೋಚನೆಯೇ ಇಲ್ಲ. ನಾನ್ಯಾಕೆ ಟಾಂಗ್ ಕೊಡಲಿ? ಅದರಿಂದ ಏನು ಸಿಗುತ್ತದೆ? ನಾವೇನು ಛತ್ರಪತಿಗಳಾ? ಅಥವಾ ಚಕ್ರವರ್ತಿಗಳಾ? ವಯಸ್ಸಾಗಿ ನಾವು ಸಹ ಒಂದು ದಿನ ಹೋಗುವವರೇ. ಬದುಕಿರಬೇಕಾದರೆ, ಸಿನಿಮಾ ನಮ್ಮ ಕೈ ಹಿಡಿದರಿಬೇಕಾದರೆ, ಬೆಳೆಯುವ ಮತ್ತು ಬೆಳೆಸುವ ಪ್ರಯತ್ನ ಮಾಡಬೇಕು. ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡಬೇಕು’ ಎಂದರು ಸುದೀಪ್.
ದರ್ಶನ್ ತಮ್ಮ ಸಹೋದರನ ತರಹ ಇದ್ದವರು ಎನ್ನುವ ಸುದೀಪ್, ‘ಒಬ್ಬ ನಟನ ಹೆಸರು ಮಾತ್ರ ತೆಗೆದುಕೊಂಡು ಟಾಂಟ್ ಎನ್ನುತ್ತಿದ್ದಾರೆ. ಎಲ್ಲಾ ಅಭಿಮಾನಿಗಳಿಗೂ ಅವರ ಮೆಚ್ಚಿನ ನಟರು ಬಾಸ್‍ಗಳೇ. ನನಗೂ ದರ್ಶನ್‍ಗೂ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬಹಳ ನೋವಿನಲ್ಲಿದೆ. ನಮ್ಮ ಹಿರಿಯರು ಚಿತ್ರರಂಗದ ಜವಾಬ್ದಾರಿಯನ್ನು ಹೊತ್ತು, ಅದನ್ನು ಬೆಳೆಸಿ, ಇವತ್ತು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ಇನ್ನಷ್ಟು ಬೆಳೆಸಿ, ಮುಂದಿನ ತಲೆಮಾರಿನವರಿಗೆ ಕೊಟ್ಟು ಹೋಗಬೇಕು. ಆ ಬಗ್ಗೆ ಗಮನಹರಿಸಬೇಕೋ? ಅಥವಾ ಇಂಥ ವಿಷಯಗಳ ಬಗ್ಗೆ ಗಮನಹರಿಸಬೇಕೋ? ಎಂದು ಅವರು ಪ್ರಶ್ನಿಸಿದರು.