KGF Avinash; ಕನ್ನಡಕ್ಕಿಂತ ಬೇರೆ ಭಾಷೆಗಳಲ್ಲಿ ಹೆಚ್ಚು ಬ್ಯುಸಿಯಾದ ‘ಕೆಜಿಎಫ್’ ನಟ

ಕನ್ನಡದಲ್ಲಿ ಗಮನಸೆಳೆದ ಅದೆಷ್ಟೋ ನಟರು, ಕನ್ನಡದಲ್ಲೇ ಅವಕಾಶವಿಲ್ಲದೆ, ಬೇರೆ ಭಾಷೆಗಳ ಚಿತ್ರಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅಂಥವರ ಸಾಲಿನಲ್ಲಿ ‘ಕೆಜಿಎಫ್’ ಚಿತ್ರಗಳ ಖ್ಯಾತಿಯ ಅವಿನಾಶ್ (KGF Avinash) ಅಲಿಯಾಸ್ ಆ್ಯಂಡ್ರೂಸ್ ಸಹ ಒಬ್ಬರು.
ಬೆಂಗಳೂರು ಮೂಲದ ಅವಿನಾಶ್, ‘ಕೆಜಿಎಫ್’ ಚಿತ್ರದಲ್ಲಿ ಆ್ಯಂಡ್ರೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಯಶಸ್ವಿಯಾಗಿ ಅವಿನಾಶ್ ಸಹ ಗಮನಸೆಳೆದರು. ಆದರೆ, ಕನ್ನಡದಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ‘ಕೆಜಿಎಫ್’ ನಂತರ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ನಟಿಸಿರುವ ಅವಿನಾಶ್, ಪರಭಾಷೆಯ ಚಿತ್ರಗಳಲ್ಲಿ ಬೇಡಿಕೆಯ ನಟರಾಗಿದ್ದಾರೆ.
ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’, ಚಿರಂಜೀವಿ ಅಭಿನಯದ ‘ವಾಲ್ಟರ್ ವೀರಯ್ಯ’, ರಜನಿಕಾಂತ್ ಅಭಿನಯದ ‘ವೆಟ್ಟಯಾನ್’, ಸೂರ್ಯ ಅಭಿನಯದ ‘ಕಂಗುವಾ, ಆರ್ಯ ಅಭಿನಯದ ‘ಕಾದರ್ ಭಾಷ ಎಂದ್ರ ಮುತ್ತುರಾಮಲಿಂಗಂ’, ಮಲಯಾಳಂನ ‘ಒರು ಪೆರುಂ ಕಲಿಯಟ್ಟಂ’, ಹಿಂದಿಯ ‘ಬೇಬಿ ಜಾನ್’ ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಅವಿನಾಶ್, ಮುಂಬರುವ ವಿಜಯ್ ಸೇತುಪತಿ ಅಭಿನಯದ ‘ಏಸ್’, ಅಜಿತ್ ಅಭಿನಯದ ‘ಗುಡ್ ಬ್ಯಾಡ್ ಅಗ್ಲ’, ‘ಕಿಂಗ್ಡಮ್’, ‘ಬುಲೆಟ್’, ‘ನಾಗಬಂಧಂ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು, ಆ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ.
ತಮಗೆ ಚಿತ್ರರಂಗದಲ್ಲಿ ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವ ಆಸೆ ಎನ್ನುವ ಅವಿನಾಶ್, ‘ಒಳ್ಳೆಯ ವಿಲನ್ ಪಾತ್ರಗಳು, ಅರ್ಥಪೂರ್ಣ ಪೋಷಕ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ. ಅಭಿನಯಕ್ಕೆ ಪ್ರಾಮುಖ್ಯತೆ ಇರಬೇಕು. ‘ಗುರುದೇವ್ ಹೊಯ್ಸಳ’ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿತ್ತು. ‘ಕಂಗುವ’ ಚಿತ್ರದಲ್ಲಿ ಸೂರ್ಯ ತಂದೆಯಾಗಿ ಅಭಿನಯಿಸಿದ್ದೇನೆ. ಒಬ್ಬ ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವಾಸೆ ಇದೆ. ಒಳ್ಳೆಯ ಪಾತ್ರಗಳಿಗಾಗಿ ಎದುರುನೋಡುತ್ತಿದ್ದೇನೆ’ ಎನ್ನುತ್ತಾರೆ.
ನಟನೆ ಜೊತೆಗೆ ದೇಹದಾರ್ಢ್ಯದ ಬಗ್ಗೆಯೂ ಜಾಸ್ತಿ ಗಮನಕೊಡುವ ಅವಿನಾಶ್ ಕಟ್ಟುಮಸ್ತಾದ ದೇಹವನ್ನು ರೂಪಿಸಿಕೊಂಡಿದ್ದಾರೆ. ವಿಲನ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಅವಿನಾಶ್, ಕನ್ನಡದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ.
ಪ್ರತಿಭಾವಂತರಿದ್ದೂ ಅವರನ್ನೆಲ್ಲಾ ಬಿಟ್ಟು ಪರಭಾಷೆಯ ನಟರಿಗೆ ಮಣೆ ಹಾಕುವ ಚಿತ್ರರಂಗದವರು, ಯಾವಾಗ ಕನ್ನಡದ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾರೋ ಗೊತ್ತಿಲ್ಲ.


(kgf avinash getting more opportunities in telugu, tamil, maleyalam film industry)