Kapata Nataka Sutradhari; ಒಂದು ಸಾವಿರ ವರ್ಷ ವರ್ಷ ಹಿಂದಿನ ದೇವಸ್ಥಾನದಲ್ಲಿ ‘ಕಪಟ ನಾಟಕ ಸೂತ್ರಧಾರಿ’

ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ‘ಕಪಟ ನಾಟಕ ಪಾತ್ರಧಾರಿ’ (Kapata Nataka Sutradhari) ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಇದೀಗ ‘ಕಪಟ ನಾಟಕ ಸೂತ್ರಧಾರಿ’ಯ ಸಮಯ. ಈ ಬಾರಿ ಸಂಪೂರ್ಣ ಹೊಸಬರ ತಂಡವೊಂದು ಈ ಚಿತ್ರವನ್ನು ರೂಪಿಸಿದ್ದು, ನಟ-ನಿರ್ಮಾಪಕ ಧನಂಜಯ್, ಈ ಚಿತ್ರದ ಮೊದಲ ನೋಟದ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.
‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ, ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ಧನಂಜಯ್, ಸಂಗೀತಾ ಭಟ್, ಮಂಸೋರೆ, ಕೆ.ಎಂ. ಚೈತನ್ಯ ಮುಂತಾದವರು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಚಿತ್ರವು ಸಮಾಜಕ್ಕೆ ಕನ್ನಡಿ ಹಿಡಿಯುವಂತಹ ಕಥೆ ಇರುವ ಚಿತ್ರವಂತೆ. ಈ ಚಿತ್ರಕ್ಕೆ ಎಂ.ವಿ. ಧೀರಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಮಾಜದಲ್ಲಿರುವ ತಾರತಮ್‍ಯ, ಶೋಷಣೆಗಳ ಕಥೆ ಈ ಚಿತ್ರದಲ್ಲಿದ್ದು, ಇದೊಂದು ಸಾಮಾಜಿಕ, ರಾಜಕೀಯ ವಿಡಂಬನಾತ್ಮಕ ಚಿತ್ರ ಎನ್ನಬಹುದಂತೆ.
‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. 55 ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಅಂತಿಮ ಹಂತದಲ್ಲಿದೆ. ವಿಶೇಷವೆಂದರೆ, 100ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

ಈ ಚಿತ್ರವನ್ನು ಕ್ರೌಡ್ ಫಂಡಿಂಗ್ ಮಾದರಿಯಲ್ಲಿ ವಿ.ಎಸ್.ಕೆ ಸಿನಿಮಾಸ್ ಬ್ಯಾನರಿನಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೂಲತಃ ಇಂಜಿನಿಯರ್ ಆಗಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀರೇಶ್ ಎನ್.ಟಿ.ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ಈ ಚಿತ್ರಕ್ಕಿದ್ದು, ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಗೊಳಿಸಲಿದೆ.
ಇದನ್ನೂ ಓದಿ:-
One thought on “Kapata Nataka Sutradhari; ಒಂದು ಸಾವಿರ ವರ್ಷ ವರ್ಷ ಹಿಂದಿನ ದೇವಸ್ಥಾನದಲ್ಲಿ ‘ಕಪಟ ನಾಟಕ ಸೂತ್ರಧಾರಿ’”