Interval completes 25 days; 22 ಸಾವಿರ ಜನ ನೋಡಿದ ‘ಇಂಟರ್ವೆಲ್’ಗೆ 25 ದಿನದ ಸಂಭ್ರಮ

- 25 ದಿನದ ಸಂಭ್ರಮದಲ್ಲಿ ‘ಇಂಟರ್ವೆಲ್’
- ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರ ಮೆಚ್ಚುಗೆ
- ಇಂಟರ್ವೆಲ್ ಯಶಸ್ಸಿಗೆ ಪವನ್ ಒಡೆಯರ್ ಸಂತಸ
ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು 25 ದಿನ ಮುಗಿಸಿವೆ, 50 ದಿನ ಮುಗಿಸಿವೆ ಎಂದು ಚಿತ್ರತಂಡಗಳು ಹೇಳಿಕೊಳ್ಳುತ್ತವೆ. ಆದರೆ, ಚಿತ್ರದ ಗಳಿಕೆ ಎಷ್ಟು? ಹಾಕಿದ ಬಂಡವಾಳ ಬಂದಿದೆಯಾ? ಎಂಬ ವಿಷಯವನ್ನು ಮಾತ್ರ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಈ ವರ್ಷ 25 ದಿನಗಳು ಓಡಿದ ಚಿತ್ರಗಳ ಪೈಕಿ ‘ಇಂಟರ್ವೆಲ್’ (Interval) ಸಹ ಒಂದು.
ಗಣೇಶ ಎಂಬ ಒಂದೇ ಹೆಸರಿನ ಮೂವರು ಸ್ನೇಹಿತರು ತಮ್ಮ ಬಾಲ್ಯ ಮತ್ತು ಯೌವ್ವನದಲ್ಲಿ ಮಾಡುವ ತರಲೆಗಳು ಮತ್ತು ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂದು ಹೇಳುವ ಚಿತ್ರವೇ ‘ಇಂಟರ್ವೆಲ್’. ಭರತವರ್ಷ್ ಪಿಚ್ಚರ್ಸ್ ಅಡಿಯಲ್ಲಿ ಸುಖೇಶ್ (ಸುಖಿ) ಹಾಗೂ ಭರತ್ ವರ್ಷ ಸೇರಿ ನಿರ್ಮಿಸಿರುವ ಹಾಗೂ ಭರತ್ ವರ್ಷ (Bharat Varsha) ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಕಳೆದ ತಿಂಗಳು ಬಿಡುಗಡೆಯಾಗಿ 25 ದಿನಗಳ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ಚಿತ್ರತಂಡ ಗೌರವಿಸಿದೆ. ನಟ-ನಿರ್ದೇಶಕ ಪವನ್ ಒಡೆಯರ್ ಈ ಸಮಾರಂಭಕ್ಕೆ ಬಂದು ಚಿತ್ರತಂಡಕ್ಕೆ ದುಡಿದವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ಸಿನಿಮಾ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ಎಂಜಿನಿಯರ್‌ಗಳೇ ಸೇರಿ ಮಾಡಿರುವ ಚಿತ್ರ ಇದು. ಮಾರ್ಕೆಟಿಂಗ್ ಮಾಡುವಲ್ಲಿ ಈ ತಂಡ ಗೆದ್ದಿದೆ. ಈಗಿನ ದಿನಗಳಲ್ಲಿ 25 ದಿನ ಪೂರೈಸೋದು ಒಂದು ಮೈಲಿಗಲ್ಲಿದ್ದ ಹಾಗೆ. ಅದನ್ನು ಈ ತಂಡ ಸಾಧಿಸಿದೆ. ಕಾಲೇಜ್ ಹಿನ್ನೆಲೆಯ ಸಾಕಷ್ಟು ಸಿನಿಮಾಗಳು ಬಂದಿವೆ. ನನ್ನ ‘ಗೂಗ್ಲಿ’ ಕೂಡ ಅದೇ ತರಹದ ಚಿತ್ರ. ಅಂಥಾ ಪ್ರಯತ್ನ ಮಾಡಿ ಈ ತಂಡ ಗೆದ್ದಿದೆ. ನಮ್ಮಲ್ಲಿ ತುಂಬಾ ಜನ ಪ್ರತಿಭಾವಂತರಿದ್ದಾರೆ. ಪ್ರೇಕ್ಷಕರು ಹೊಸಬರ ಸಿನಿಮಾಗಳಿಗೆ ಹೆಚ್ಚು ಆದ್ಯತೆ ಕೊಡಬೇಕು. ಮುಂದೆ ಇನ್ನಷ್ಟು ಒಳ್ಳೆಯ ಚಿತ್ರಗಳು ಮಾಡಿ’ ಎಂದು ಹಾರೈಸಿದರು.
ಚಿತ್ರದ ಹೀರೋಗಳಲ್ಲಿ ಒಬ್ಬರಾದ ಸುಖಿ ಮಾತನಾಡಿ, ‘ಈ ಚಿತ್ರ ನಮಗೆ ತೃಪ್ತಿ ಕೊಟ್ಟಿದೆ. 22 ಸಾವಿರ ಜನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಾಧ್ಯಮಗಳ ಸಹಕಾರವೂ ತುಂಬಾ ದೊಡ್ಡದು. ಒಂದು ಸಿನಿಮಾ ಮಾಡೋವಾಗ ಮೊದಲು ಸ್ಕ್ರಿಪ್ಟ್ ಮಾಡೋದು. ನಂತರ ಜನರನ್ನು ಚಿತ್ರಮಂದಿರಗಳಿಗೆ ಕರೆತರೋದು ಈ ಎರಡು ಹಂತ ಬಹಳ ಕಷ್ಟ. ಈ ಎರಡನ್ನೂ ಬಿಟ್ಟು ಉಳಿದೆಲ್ಲವನ್ನೂ ಸುಲಭವಾಗಿ ಮಾಡಬಹುದು’ ಎಂದರು.
ʻಇಂಟರ್ವೆಲ್’ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದು, ಶಶಿರಾಜ್ (Shashi Raj), ಪ್ರಜ್ವಲ್ ಕುಮಾರ್ ಗೌಡ ( Prajwal Kumar), ಸುಖಿ ( Suki), ಚರಿತ್ರ ರಾವ್ (Charithra Rao), ಸಹನ ಆರಾಧ್ಯ (Sahana), ಸಮೀಕ್ಷ, ದಾನಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

One thought on “Interval completes 25 days; 22 ಸಾವಿರ ಜನ ನೋಡಿದ ‘ಇಂಟರ್ವೆಲ್’ಗೆ 25 ದಿನದ ಸಂಭ್ರಮ”