ನಿರ್ದೇಶನಕ್ಕಿಳಿದ ಪುಟ್ಟಗೌರಿ ; ರಂಜನಿ ರಾಘವನ್ ಇಳಯರಾಜ ಸಂಗೀತ

ಕಳೆದ ವರ್ಷ ‘ನೈಟ್ ಕರ್ಫ್ಯೂ’ ಮತ್ತು ‘ಕಾಂಗರೂ’ ಚಿತ್ರಗಳಲ್ಲಿ ನಟಿಸಿದ್ದ ರಂಜನಿ ಅಭಿನಯದ ಯಾವೊಂದು ಚಿತ್ರ ಸಹ ಆ ನಂತರ ಬಿಡುಗಡೆ ಆಗಲಿಲ್ಲ. ‘ಸತ್ಯಂ’ ಮತ್ತು ‘ಸ್ವಪ್ನ ಮಂಟಪ’ ಎಂಬ ಎರಡು ಚಿತ್ರಗಳಲ್ಲಿ ಅವರು ನಟಿಸಿದ್ದಾರಾದರೂ, ಆ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ.

ಈ ಮಧ್ಯೆ, ರಂಜನಿ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ನಟನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ರಂಜನಿ ಇದೀಗ ನಿರ್ದೇಶದತ್ತ ವಾಲಿದ್ದಾರೆ. ಅವರೊಂದು ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಕುರಿತು ಮಾತನಾಡಿರುವ ರಂಜನಿ, ‘ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ. ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕಥೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಮತ್ತು ಪ್ರೋತ್ಸಾಹದಿಂದ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ’ ಎಂದು ಹೇಳಿಕೊಂಡಿದ್ದಾರೆ.
ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವ ಕುರಿತು ಮಾತನಾಡುವ ಅವರು, ‘2023ರ ಸೆಪ್ಟೆಂಬರ್ 13ರಮದು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದರೆ ಅದೇ ದೊಡ್ಡದು ಅಂತ ಅಂದುಕೊಂಡಿದ್ದೆ. ಅವರಿಗೆ ಕಥೆ ಹೇಳುವ ಅವಕಾಶ ಸಿಕ್ಕಿತ್ತು. ಅವರು ‘ಕನ್ನಡದಲ್ಲೇ ಕಥೆ ಹೇಳಮ್ಮ, ನನಗೆ ಕನ್ನಡ ಚೆನ್ನಾಗಿ ಬರುತ್ತೆ. ಕೊಲ್ಲೂರು ಮೂಕಾಂಬಿಕೆ ನನ್ನವ್ವ …’ ಎಂದು ಮಾತು ಶುರು ಮಾಡಿದರು. ಮೂರೇ ದಿನಗಳಲ್ಲಿ ಕಥೆ ಇಷ್ಟವಾಗಿದೆ ಎಂದು ನಮ್ಮ ಸಿನಿಮಾದ ಭಾಗವಾದರು’ ಎನ್ನುತ್ತಾರೆ ರಂಜನಿ.
ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಜೊತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಚಾಲ್ತಿಯಲ್ಲಿದೆ.