ಹೊಸ ವರ್ಷಕ್ಕೆ ಹೊಸ ಹೀರೋ: ಚಿತ್ರರಂಗಕ್ಕೆ ಸುದೀಪ್ ಅಕ್ಕನ ಮಗ ಎಂಟ್ರಿ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, ‘ಜಿಮ್ಮಿ’ ಎಂಬ ಚಿತ್ರದ ಮೂಲಕ ನಾಯಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಎರಡು ವರ್ಷಗಳ ಹಿಂದೆಯೇ ‘ಜಿಮ್ಮಿ’ ಚಿತ್ರದ ಘೋಷಣೆಯಾಗುವುದರ ಜೊತೆಗೆ ನಾಯಕನನ್ನು ಪರಿಚಯಿಸುವ ಟೀಸರ್ ಸಹ ಬಿಡುಗಡೆಯಾಗಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ‘ಜಿಮ್‍ಮಿ’ ಶುರುವಾಗಲೇ ಇಲ್ಲ.

ಇದೀಗ ಹೊಸ ವರ್ಷಕ್ಕೆ ಸಂಚಿತ್ ಅಭಿನಯದ ಹೊಸ ಚಿತ್ರವೊಂದರ ಘೋಷಣೆಯಾಗಿದೆ. ಸುದೀಪ್ ಅವರ ಪತ್ನಿ ಮತ್ತು ಮಗಳ ಹೆಸರಲ್ಲಿ ಪ್ರಾರಂಭವಾಗಿರುವ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು KRG ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.
ಸಂಚಿತ್ ಮೊದಲ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋ ವಿವೇಕ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮೈಸೂರು ಮೂಲದ ವಿವೇಕ, ಸಂಚಿತ್‍ಗಾಗಿ ವಿಭಿನ್ನ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರಂತೆ.
ಇದು ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಈ ಮೊದಲ ನೋಟ ಮತ್ತು ಶೀರ್ಷಿಕೆ ಅನಾವರಣ ಜನವರಿ 24ರಂದು ನಡೆಯಲಿದೆ. ಅಂದೇ ಚಿತ್ರದ ಮುಹೂರ್ತ ಸಹ ನಡೆಯಲಿದೆ. ಇನ್ನು ಈ ಚಿತ್ರದ ನಾಯಕಿ ಯಾರು? ಯಾರೆಲ್ಲಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮತ್ತು ಕೆಲಸ ಮಾಡಲಿದ್ದಾರೆ ಮುಂತಾದಪ್ರಶ್ನೆಗಳಿಗೆ ಮುಹೂರ್ತದ ದಿನವೇ ಉತ್ತರ ಸಿಗಲಿದೆ.