ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

Gajarama

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ಆದರೆ, ಡಿ. 25ರಂದು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬಿಡುಗಡೆಯಾದ ಕಾರಣ, ಅಂದು ‘ಗಜರಾಮ’ ಬರಲಿಲ್ಲ. ಮುಂದೆ ಯಾವಾಗ? ಎಂದು ಎಲ್ಲರೂ ಕೇಳುವಾಗಲೇ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಇದೀಗ ಚಿತ್ರತಂಡ ಘೋಷಣೆ ಮಾಡಲಾಗಿದೆ.

‘ಗಜರಾಮ’ ಚಿತ್ರವನ್ನು ಫೆಬ್ರವರಿ 07ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಅದರಂತೆ ಅಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ‘ಗಜರಾಮ’ನಷ್ಟೇ ಅಲ್ಲ, ‘ಅನ್‍ಲಾಕ್‍ ರಾಘವ’, ‘ಎಲ್ಲೋ ಜೋಗಪ್ಪ ನಿನ್ನರಮನನೆ’, ‘ಮಿಸ್ಟರ್‍ ರಾಣಿ’, ‘ಕೋರ’ ಮುಂತಾದ ಚಿತ್ರಗಳು ಸಹ ಬಿಡುಗಡೆಯಾಗಲಿವೆ. ಈಗಾಗಲೇ ಕೆಲವು ಚಿತ್ರಗಳು ಅದೇ ದಿನ ಬರುವುದಾಗಿ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದೆ.

‘ಗಜರಾಮ’ ಚಿತ್ರವು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಕಳೆದ ವರ್ಷ ಚಿತ್ರದ ಚಿತ್ರೀಕರಣ ಸಹ ಮುಗಿದಿತ್ತು. ಈಗಾಗಲೇ ಚಿತ್ರದ ಟೀಸರ್‍ ಮತ್ತು ‘ಸಾರಾಯಿ ಶಾಂತಮ್ಮ …’ ಎಂಬ ಹಾಡು ಸಹ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ‘ಸಾರಾಯಿ ಶಾಂತಮ್ಮ’ಳಾಗಿ ರಾಗಿಣಿ ದ್ವಿವೇದಿ ಅತಿಥಿ ಪಾತ್ರದಲ್ಲಿ ಹೆಜ್ಜೆ ಹಾಕಿದ್ದಾರೆ.

‘ಗಜರಾಮ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ಸುನಿಲ್ ಕುಮಾರ್. ಈ ಚಿತ್ರದಲ್ಲಿ ರಾಜವರ್ಧನ್‍ ಮಾಸ್‍ ಪಾತ್ರವೊಮದರಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ತಪಸ್ವಿನಿ ಪೂಣಚ್ಛ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ನಟಿಸಿದರೆ, ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಈ ಹಿಂದೆ ‘ಬಾಂಡ್ ರವಿ’ ಚಿತ್ರವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನರಸಿಂಹಮೂರ್ತಿ, ‘ಗಜರಾಮ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದರೆ, ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಾಹಣವಿದೆ.

Leave a Reply

Your email address will not be published. Required fields are marked *