Gatha Vaibhava; ಪೋರ್ಚುಗಲ್‌ನಲ್ಲಿ ‘ಗತವೈಭವ’ ಶೂಟಿಂಗ್ ಮುಗಿಸಿದ ‘ಸಿಂಪಲ್’ ಸುನಿ

ದುಷ್ಯಂತ್ (Dushyanth) ಮತ್ತು ಅಶಿಕಾ ರಂಗನಾಥ್ (Ashika Ranganath) ಅಭಿನಯದಲ್ಲಿ ಸುಮಾರು ಎರಡು ವರ್ಷಗಳ ಹಿಂದೆಯೇ ‘ಗತವೈಭವ’ (Gatha Vaibhava) ಎಂಬ ಚಿತ್ರ ಪ್ರಾರಂಭಿಸಿದ್ದರು ನಿರ್ದೇಶಕ ‘ಸಿಂಪಲ್’ ಸುನಿ (Simple Suni). ಚಿತ್ರದ ಚಿತ್ರೀಕರಣ ಪ್ರಾರಂಭವಾದ ಸುದ್ದಿ ಇತ್ತಾದರೂ, ನಂತರ ಚಿತ್ರ ಏನಾಯಿತು ಎಂದೇ ಗೊತ್ತಿರಲಿಲ್ಲ. ಇದೀಗ ಸುನಿ ಸದ್ದಿಲ್ಲದೆ ಚಿತ್ರವನ್ನು ಮುಗಿಸಿದ್ದಾರೆ. ಅಷ್ಟೇ ಅಲ್ಲ, ಇದೇ ವರ್ಷ ಬಿಡುಗಡೆ ಮಾಡುವುದಕ್ಕೂ ಸಜ್ಜಾಗಿದ್ದಾರೆ.
ಹೌದು, ‘ಗತವೈಭವ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು, ಪೋರ್ಚುಗಲ್ ಮುಂತಾದ ಕಡೆ 100ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದೇ ವರ್ಷದ ಮೊದಲಾರ್ಧದಲ್ಲಿ ‘ಗತವೈಭವ’ ಚಿತ್ರವನ್ನು ತೆರೆಗೆ ತರುವುದಕ್ಕೆ ಅವರು ಮುಂದಾಗಿದ್ದಾರೆ.
ಸುನಿ ಈ ಹಿಂದೆ ಕಾಮಿಡಿ, ಫ್ಯಾಂಟಸಿ, ಥ್ರಿಲ್ಲರ್, ಹಾರರ್ ಹೀಗೆ ವಿಭಿನ್ನವಾದ ಜಾನರ್‍ಗಳ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಅವರು ಪ್ರೇಮಕಥೆಯನ್ನು ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಟ ದುಷ್ಯಂತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ.
ಸುನಿ ಈ ಸಿನಿಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ‘ಗತವೈಭವ’ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ, ಸುನಿ ಸಿನಿಮಾಸ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ಮಾಣದಲ್ಲಿ ಅವರ ಜೊತೆಗೆ ಮಾತಾ ಮೂವಿ ಮೇಕರ್ಸ್‍ನ ದೀಪಕ್ ಸಹ ಕೈಜೋಡಿಸಿದ್ದಾರೆ.
‘ಗತವೈಭವ’ ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತವಿದೆ.

(Director Simple Suni has wrapped up’Gatha Vaibhava,’ starring Dushyanth and Ashika Ranganath. Shot over 100 days, the film features scenes aboard Portugal’s Santa Maria de Colombo, a replica of Christopher Columbus’ ship. The makers plan to release the film in the first half of 2025. The team recently traveled to Portugal for the final schedule of the shoot.)