ಹೆಸರು ‘ಲ್ಯಾಂಡ್‍ಲಾರ್ಡ್’; ಆದರೆ ಇದು ಬಡವರ ಕಥೆ

Landlord, Jadesh Kumar Hampe, Duniya Vijay

‘ದುನಿಯಾ’ ವಿಜಯ್‍ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿದೆ. ನೆಲಮಂಗಲದ ಬಳಿ ಇರುವ ಬರದಿ ಬೆಟ್ಟದಲ್ಲಿ ‘ಲ್ಯಾಂಡ್‍ ಲಾರ್ಡ್’ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಬೆಟ್ಟದ ಕೆಳಗೆ ಜಾತ್ರೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಸೋಮವಾರ ಚಿತ್ರೀಕರಣದ ಸ್ಥಳದಲ್ಲೇ ವಿಜಯ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

‘ಲ್ಯಾಂಡ್‍ ಲಾರ್ಡ್’ ಚಿತ್ರದ ಕುರಿತು ಮಾತನಾಡುವ ವಿಜಯ್‍, ‘ನನಗೆ ಬುದ್ಧಿ ಬಂದಾಗ ನಮ್ಮೂರಲ್ಲಿ ಕರೆಂಟ್‍ ಇರಲಿಲ್ಲ. ಬುಡ್ಡಿದೀಪದಲ್ಲಿ ನಾವೆಲ್ಲರೂ ಓದಿ ಬೆಳೆದವರು. ಜಾತಿ, ಧರ್ಮ ಭೇದ-ಭಾವ ಇಲ್ಲದೆ ಎಲ್ಲರೂ ಒಟ್ಟಿಗೆ ಬೆಳೆದ ಕಾಲವದು. ಆ ಕಾಲದಲ್ಲಿ ಇದ್ದಿದ್ದು ಶ್ರೀಮಂತ ಮತ್ತು ಬಡವ ಎಂಬ ಬೇಧವಷ್ಟೆ. ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಇದು ಬಡವರ ಕಥೆ. ನಾನಿಲ್ಲಿ ಬಡವನ್ನು ಪ್ರತಿನಿಧಿಸುತ್ತಿದ್ದೇನೆ. ಒಬ್ಬ ಬಡವ ಹೇಗೆ ‘ಲ್ಯಾಂಡ್‍ ಲಾರ್ಡ್’ ಆಗುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದರು.

ಜಡೇಶ್‍ ಹಂಪಿಗೆ ಇದು ನಿರ್ದೇಶಕರಾಗಿ ನಾಲ್ಕನೇ ಚಿತ್ರ. ಈ ಚಿತ್ರದ ಕುರಿತು ಮಾತನಾಡುವ ಜಡೇಶ್‌, ‘ಇದೊಂದು ಗ್ರಾಮೀಣ ಸೊಗಡಿನ ಕಥೆ. 1980 ರ ಕಾಲಘಟ್ಟದಲ್ಲಿ ನಡೆಯುವ‌ ಕಥೆಯೂ ಹೌದು. ನಮ್ಮ ಚಿತ್ರಕ್ಕೆ ‘ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂಬ ಅಡಿಬರಹವಿದೆ. ವಿಜಯ್‍ ಇಲ್ಲದೆ ಈ ಚಿತ್ರ ಮಾಡುವುದಕ್ಕೆ ಆಗುತ್ತಿರಲಿಲ್ಲ. ಅವರಿದ್ದುದರಿಂದಲೇ ಈ ಚಿತ್ರ ಸಾಧ್ಯವಾಗಿದೆ’ ಎಂದರು.

ಈ ಚಿತ್ರಕ್ಕೆ ಮೊದಲು ‘ರಾಚಯ್ಯ’ ಎಂಬ ಶೀರ್ಷಿಕೆ ಇದ್ದು, ಇದೀಗ ‘ಲ್ಯಾಂಡ್‍ಲಾರ್ಡ್’ ಎಂದು ಬದಲಾಗಿದ್ದು ಹೇಗೆ ಎಂಬ ಪ್ರಶ್ನೆಯೂ ಬಂತು. ಈ ಕುರಿತು ಮಾತನಾಡುವ ಜಡೇಶ್‍, ‘ಚಿತ್ರದಲ್ಲಿ ನಾಯಕನ ಹೆಸರು ರಾಚಯ್ಯ. ಹಾಗಾಗಿ, ರಾಚಯ್ಯ ಎಂದೇ ಎಲ್ಲರೂ ಕರೆಯುತ್ತಿದ್ದರು. ಆದರೆ, ನಾವೆಲ್ಲೂ ಈ ಚಿತ್ರದ ಶೀರ್ಷಿಕೆ ‘ರಾಚಯ್ಯ’ ಎಂದು ಘೋಷಿಸಿರಲಿಲ್ಲ’ ಎಂದರು.

‘ಲ್ಯಾಂಡ್‍ಲಾರ್ಡ್’ ಚಿತ್ರದಲ್ಲಿ ವಿಜಯ್ ಮಗಳು ರಿತನ್ಯಾ ಸಹ ಅವರ ಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‍ ಈ ಚಿತ್ರದುದ್ದಕ್ಕೂ 50 ಪ್ಲಸ್‍ ವಯಸ್ಸಿನವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್‍ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್‍ ಬಿ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇದೆ. ‘ಡೇರ್‍ ಡೆವಿಲ್‍ ಮುಸ್ತಾಫ’ ಚಿತ್ರದ ಶಿಶಿರ್‍ ಬಾಲ್ಕಾಡಿ ಸಹ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದ್ದು, ಈ ಹಿಂದೆ ‘ಸಾರಥಿ’ ಚಿತ್ರವನ್ನು ನಿರ್ಮಿಸಿದ್ದ ಸತ್ಯಪ್ರಕಾಶ್‍, ಈ ಚಿತ್ರವನ್ನು ತಮ್ಮ ಮಗ ಸೂರಜ್‍ ಗೌಡ ಜೊತೆಗೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

(Landlord is a Kannada action drama directed by Jadesh Kumar Hampe. Duniya Vijay playing lead role. B. Ajaneesh Loknath music composer and Swamy J Gowda make cinematography. film is produced by K.S.Suraj Gowda and K.V.Sathyaprakash under Sri Araveshwari Cine Production banner.)

Leave a Reply

Your email address will not be published. Required fields are marked *