Eddelu Manjunatha 2; ಫೆ. 21ಕ್ಕೆ ಗುರುಪ್ರಸಾದ್ ನಿರ್ದೇಶನದ ಕೊನೆಯ ಸಿನಿಮಾ ಬಿಡುಗಡೆ

ಕಳೆದ ವರ್ಷ ನಿಧನರಾದ ನಿರ್ದೇಶಕ ಗುರುಪ್ರಸಾದ್, ಅವರ ಕೊನೆಯ ಚಿತ್ರ ಜಗ್ಗೇಶ್ ಅಭಿನಯದ ‘ರಂಗನಾಯಕ’ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, ಅದು ತಪ್ಪು. ‘ರಂಗನಾಯಕ’ಕ್ಕೂ ಮೊದಲೇ ಗುರುಪ್ರಸಾದ್ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದರು. ಗುರುಪ್ರಸಾದ್ ನಿಧನರಾಗುವುದಕ್ಕೆ ಕೆಲವು ದಿನಗಳ ಹಿಂದೆ ಚಿತ್ರದ ಡಬ್ಬಿಂಗ್ ಸಹ ಮಾಡಿ ಮುಗಿಸಿದ್ದರು. ಆದರೆ, ಅದರ ಬಿಡುಗಡೆಗೂ ಮೊದಲೇ ಆತ್ಮಹತ್ಯೆಗೆ ಶರಣಾದರು.
ಈಗ ಅವರ ಅನುಪಸ್ಥಿತಿಯಲ್ಲಿ, ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 21ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಎದ್ದೇಳು ಮಂಜುನಾಥ 2’.

ಗುರುಪ್ರಸಾದ್ ಈ ಚಿತ್ರಕ್ಕೆ ನಿರ್ದೇಶಕರಷ್ಟೇ ಅಲ್ಲ, ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಹೆಸರು ಕೇಳಿದರೆ, ಇದು 2009ರಲ್ಲಿ ಬಿಡುಗಡೆಯಾದ ಅವರದೇ ನಿರ್ದೇಶನದ ‘ಎದ್ದೇಳು ಮಂಜುನಾಥ’ ಚಿತ್ರದ ಮುಂದುವರೆದ ಭಾಗ ಎಂದನಿಸಬಹುದು. ಇದು ಮುಂದುವರೆದ ಭಾಗವಲ್ಲ. ಬದಲಿಗೆ ‘ಎದ್ದೇಳು ಮಂಜುನಾಥ’ ಚಿತ್ರದ ಇನ್ನೊಂದು ಆವೃತ್ತಿ ಎನ್ನಬಹುದು. ಅದೇ ಕಾರಣಕ್ಕೆ ಚಿತ್ರಕ್ಕೆ ‘ಎದ್ದೇಳು ಮಂಜುನಾಥ 2’ ಎಂಬ ಹೆಸರನ್ನು ಇಡಲಾಗಿದೆ.
ಇತ್ತೀಚೆಗೆ ಈ ಚಿತ್ರದ ‘ಕಿತ್ತೋದ ಪ್ರೇಮ …’ ಎಂಬ ಹಾಡು ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ರಚಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಸಜ್ಜು ಹಾಡಿದ್ದಾರೆ. ಇನ್ನು, ಈ ಮೂವರೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶರತ್ ಲೋಹಿತಾಶ್ವ, ರಚಿತಾ ಮಹಾಲಕ್ಷ್ಮೀ, ‘ಕಡ್ಡಿಪುಡಿ’ ಚಂದ್ರು, ‘ಸಿಂಪಲ್’ ಸುನಿ, ಚೇತನ್ ಮುಂಡಾಡಿ, ಉದಯ್ ಮೆಹ್ತಾ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶರತ್ ಲೋಹಿತಾಶ್ವ, ‘ನಾನು ಗುರುಪ್ರಸಾದ್ ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ. ನಮ್ಮ ತಂದೆ ‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರವನ್ನು ಟಿವಿಯಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದರು. ನಾನು ಅಪ್ಪನ ಜೊತೆ ಆ ಚಿತ್ರ ನೋಡಿ ಎಂಜಾಯ್ ಮಾಡಿದ್ದೇನೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ’ ಎಂದರು.
ನಾಯಕಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ‘ನಾನು ‘ರಂಗನಾಯಕ’ ಚಿತ್ರಕ್ಕೂ ಮೊದಲೇ ಈ ಚಿತ್ರದಲ್ಲಿ ನಟಿಸಿದ್ದೆ. 2020ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದೆವು. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಇದು ಗುರುಪ್ರಸಾದ್ ಅವರ ಕನಸಿನ ಚಿತ್ರ. ಈ ಚಿತ್ರವನ್ನು ದೊಡ್ಡ ಯಶಸ್ಸು ಮಾಡಿ ತೋರಿಸುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ಅವರು ನಿಧನರಾದ ಮೇಲೆ, ಚಿತ್ರ ಬಿಡುಗಡೆ ಆಗಬಹುದು ಎಂಬ ನಂಬಿಕೆ ಇರಲಿಲ್ಲ. ಆದರೆ, ಚಿತ್ರತಂಡದವರೆಲ್ಲಾ ಸೇರಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.
‘ಎದ್ದೇಳು ಮಂಜುನಾಥ 2’ ಚಿತ್ರವನ್ನು ರಾಮ್ ಮೂವೀಸ್, ಗುರುಪ್ರಸಾದ್ inc ಹಾಗೂ ಫ್ರೆಂಡ್ಸ್ ಫೋರ್ಮ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಿಂದ ಬರುವ ಲಾಭದ ಶೇ. 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದು ಎಂದು ನಿರ್ಮಾಪಕರಲ್ಲೊಬ್‍ಬರಾದ ಮೈಸೂರು ರಮೇಶ್ ಹೇಳಿದ್ದಾರೆ.
(Director Guruprasad’s Final Film, ‘Eddelu Manjunatha 2’, To Release On February 21)