Dhanveer Gowda; ಮುನಿಸಿನ ನಡುವೆಯೇ ‘ವಾಮನ’ ಚಿತ್ರದ ತಾಯಿ – ಮಗನ ಬಾಂಧವ್ಯದ ಹಾಡು ಬಿಡುಗಡೆ

ಧನ್ವೀರ್ ಗೌಡ (Dhanveer Gowda) ಅಭಿನಯದ ‘ವಾಮನ’ ಚಿತ್ರವು ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ಕೆಲವೇ ದಿನಗಳಿರುವಾಗ ರದ್ದಾಗುವುದರ ಜೊತೆಗೆ, ಚಿತ್ರ ಇನ್ನು ಬಿಡುಗಡೆಯೇ ಆಗುವುದಿಲ್ಲ ಎಂಬ ಮಾತೊಂದು ಕೇಳಿ ಬಂದಿತ್ತು. ಅದಕ್ಕೆ ಕಾರಣ ಧನ್ವೀರ್ ಮತ್ತು ನಿರ್ಮಾಪಕ ಚೇತನ್ ಗೌಡ ನಡುವಿನ ಮುನಿಸು ಎಂದು ಹೇಳಲಾಗಿತ್ತು. ಹೀಗಿರುವಾಗಲೇ, ಏಪ್ರಿಲ್ 10ರಂದು ‘ವಾಮನ’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಚಿತ್ರವೇನೋ ಬಿಡುಗಡೆಗೆ ಸಜ್ಜಾಗಿದ್ದರೂ, ನಿರ್ಮಾಪಕರು ಮತ್ತು ಧನ್ವೀರ್ ನಡುವಿನ ಮುನಿಸು ಬಗೆಹರಿದಂತೆ ಕಾಣುತ್ತಿಲ್ಲ.
ಇತ್ತೀಚೆಗೆ ಚಿತ್ರದ ತಾಯಿ ಸೆಂಟಿಮೆಂಟ್ ಹಾಡೊಂದು ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ನಿರ್ಮಾಪಕರು ಮತ್ತು ನಾಯಕ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ತಮ್ಮ ಭಾಷಣಗಳಲ್ಲಿ ಇನ್ನೊಬ್ಬರ ಹೆಸರನ್ನು ತೆಗೆಯಲಿಲ್ಲ. ಒಂದೂವರೆ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಚಿತ್ರವು, ಇಷ್ಟು ತಡವಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ, ‘ನಾವು ಬಿಡುಗಡೆ ದಿನಾಂಕ ಘೋಷಣೆ ಮಾಡಿರಲಿಲ್ಲ. ವ್ಯಾಪಾರದ ವಿಷಯವಾಗಿ ಚಿತ್ರ ಸ್ವಲ್ಪ ತಡವಾಯಿತು’ ಎಂದು ಹೇಳಿದರು.
‘ವಾಮನ’ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ‘ಕಂದ ಕನಸ ರೂಪ …’ (Kanda Kanasa Roopa) ಎಂಬ ತಾಯಿ – ಮಗನ ಬಾಂಧವ್ಯದ ಕುರಿತಾದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ‘ಕಾಂತಾರ’ ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು A2 music ಚಾನಲ್‍ನಲ್ಲಿ ಬಿಡುಗಡೆಯಾಗಿದೆ.
ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಂಕರ್ ರಾಮನ್, ‘ನನಗೆ ತಾಯಿಯನ್ನು ಕುರಿತಾದ ‘ಕೈ ತುತ್ತು ಕೊಟ್ಟವಳೆ ಐ ಲವ್ ಯು ಮದರ್ ಇಂಡಿಯಾ …’ ಹಾಗೂ ‘ಬೇಡುವೆನು ವರವನು ಕೊಡೆ ತಾಯಿ ಜನುಮವನು …’ ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಸುಂದರ ಹಾಡನ್ನು ಬರೆದುಕೊಟ್ಟಿದ್ದಾರೆ. ತಾಯಿ ತನ್ನ ಬವಣೆಗಳನ್ನು ಮಗನ ಮುಂದೆ ಹೇಳಿಕೊಳ್ಳುವ ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ನಿರ್ಮಿಸಿರುವ, ‘ವಾಮನ’ ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಜೊತೆಗೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ, ಭೂಷಣ್ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ.

