Mr. Rani; ಸೈಕೋ ಜಯಂತ್, ರಾಣಿ ಯಾಕಾದ? ಫೆ. 07ರಂದು ಸಿಗಲಿದೆ ಉತ್ತರ

‘ಲಕ್ಷ್ಮೀ ನಿವಾಸ’ (Lakshmi Nivasa) ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರ ಮಾಡಿ ಸಾಕಷ್ಟು ಜನಪ್ರಿಯವಾಗಿರುವ ದೀಪಕ್ ಸುಬ್ರಹ್ಮಣ್ಯ (Deepak Subramanya) ಇದೀಗ ‘ಮಿಸ್ಟರ್ ರಾಣಿ’ (Mr Rani) ಯಾಗಿದ್ದು, ಈ ಚಿತ್ರವು ಇದೇ ಫೆ.07ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೆಜ್ಜೆ ಇಡುವ ಸಾಮಾನ್ಯ ಯುವಕನೊಬ್ಬ, ಅನಿವಾರ್ಯವಾಗಿ ನಾಯಕಿಯಾಗುವ ಕಥೆ ಈ ಚಿತ್ರದಲ್ಲಿದೆ. ನಾಯಕಿಯಾಗಿ ದೀಪಕ್ ಸುಬ್ರಹ್ಮಣ್ಯ ಕಾಣಿಸಿಕೊಂಡಿರುವುದು ವಿಶೇಷ. ಹಾಗೆ ನಾಯಕಿಯಾದ ನಾಯಕನು ಚಿತ್ರರಂಗದಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ.
ಈ ಹಿಂದೆ ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರವನ್ನು ನಿರ್ದೇಶನ ಮಾಡಿರುವ ಮಧುಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

‘ಬಾಹುಬಲಿ’ ಸಿನಿಮಾದ ಸಹಾಯಕ ಛಾಯಾಗ್ರಾಹಕರಾಗಿದ್ದ ರವೀಂದ್ರನಾಥ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿದ್ದಾರೆ. ಇನ್ನು, ನಾಯಕನನ್ನು ತಮ್ಮ ಚೆಂದದ ಮೇಕಪ್ ಮೂಲಕ ನಾಯಕಿಯನ್ನಾಗಿ ಚಂದನ ಮಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಮತ್ತು ರಿತ್ವಿಕ್ ಮುರಳೀಧರ್ ಅವರ ಸಂಗೀತವಿದೆ. ಈಗಾಗಲೇ ‘ಮಿಸ್ಟರ್ ರಾಣಿ’ ಚಿತ್ರದ ಟ್ರೇಲರ್ ಎ2 ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಿದ್ದು, ಈ ಟ್ರೇಲರನ್ನು 35 ಲಕ್ಷ ಜನ ನೋಡಿ ವೀಕ್ಷಣೆ ಮಾಡಿದ್ದಾರೆ.
ಇದೊಂದು ಕ್ರೌಡ್ ಫಂಡೆಂಡ್ ಚಿತ್ರವಾಗಿದ್ದು, 100ಕ್ಕೂ ಹೆಚ್ಚು ಜನ ಈ ಚಿತ್ರದಲ್ಲಿ ಹಣ ತೊಡಗಿಸಿದ್ದಾರೆ. ಈ ಚಿತ್ರವನ್ನು ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣ ಮಾಡಲಾಗಿದ್ದು, ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ ಜೊತೆಗೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್, ಆನಂದ್ ನೀನಾಸಂ ಮುಂತಾದವರು ನಟಿಸಿದ್ದಾರೆ.