ದರ್ಶನ್ ಜೀವನ ಹಾಳು ಮಾಡಿಕೊಂಡ್ರು; ರಮ್ಯಾ ಬೇಸರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಬಗ್ಗೆ ರಮ್ಯಾ ಹಿಂದೊಮ್ಮೆ ಮಾತನಾಡಿ, ಅಭಿಮಾನಿಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ದರ್ಶನ್ ಬಗ್ಗೆ ಇನ್ನೊಮ್ಮೆ ಮಾತನಾಡಿರುವ ಅವರು, ದರ್ಶನ್ ಕಷ್ಟಪಟ್ಟು ಮೇಲೆ ಬಂದು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರದಿಂದ ಹೇಳಿದ್ದಾರೆ.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ’ ಎಂದು ಹೇಳಿದರು.
ದರ್ಶನ್ ಕುರಿತು ಮಾತನಾಡಿರುವ ಅವರು, ‘ದರ್ಶನ್ ಲೈಟ್‍ಬಾಯ್‍ನಿಂದ ತಮ್ಮ ವೃತ್ತಿಜೀವನ ಆರಂಭಿಸಿ, ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಆದರೆ, ಜೀವನ ಹಾಳು ಮಾಡಿಕೊಂಡರು. ಈ ಪ್ರಕರಣ ಆಗದೇ ಇದ್ದಿದ್ದರೆ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದಿತ್ತು’ ಎಂದರು.
ದರ್ಶನ್ ಅವರ ಬಗ್ಗೆ ಮಾತನಾಡಿದ್ದಿಕ್ಕೆ ಹಿಂದೊಮ್ಮೆ ಅವರ ಅಭಿಮಾನಿಗಳಿಂದ ರಮ್ಯಾ ಟ್ರೋಲ್ ಆಗಿದ್ದರು. ಈ ಸಂಬಂಧ ದೂರು ಸಹ ಕೊಟ್ಟಿದ್ದರು. ದೂರು ಕೊಟ್ಟ ಮೇಲೆ ಕೆಟ್ಟ ಕಾಮೆಂಟ್‍ಗಳು ಬರುವುದು ನಿಂತಿದೆಯಂತೆ. ‘ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ’ ಎಂದರು.
ದರ್ಶನ್ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವಾಗುತ್ತದಾ? ಎಂಬ ಪ್ರಶ್ನೆಗೆ, ‘ಸಿನಿಮಾ ಗೆಲ್ಲುವುದಕ್ಕೆ ಸ್ಟಾರ್ ನಟರೇ ಬೇಕಿಲ್ಲ. ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ‘ಸು ಫ್ರಂ ಸೋ’ ಸಾಕ್ಷಿ. ಆ ಚಿತ್ರದಲ್ಲಿ ಯಾವ ಸ್ಟಾರ್ ನಟರು ಇದ್ದಾರೆ? ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ’ ಎಂದು ರಮ್ಯಾ ಹೇಳಿದ್ದಾರೆ.