Chowkidar Film : ಇದು ಪ್ರತೀ ಮನೆಯ ‘ಚೌಕಿದಾರ್’ನ ಕಥೆ; ಚಿತ್ರೀಕರಣ ಮುಕ್ತಾಯ

ಒಂದು ಚಿತ್ರ ಶುರುವಾದಲ್ಲೇ ಮುಗಿಯುವುದು ಬಹಳ ಅಪರೂಪ. ಎಲ್ಲೋ ಮುಹೂರ್ತವಾಗುವ ಚಿತ್ರಗಳು, ಇನ್ನೆಲ್ಲೋ ಮುಗಿಯುತ್ತವೆ. ಆದರೆ, ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಅಭಿನಯದ ‘ಚೌಕಿದಾರ್‍’ ಚಿತ್ರದ ಚಿತ್ರೀಕರಣ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಾರಂಭವಾಗಿತ್ತು. ಈಗ ಚಿತ್ರೀಕರಣ ಮುಕ್ತಾಯವಾಗಿದ್ದು, ಅಲ್ಲೇ ಕುಂಬಳಕಾಯಿ ಒಡೆಯಲಾಗಿದೆ.

ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣದ ಮತ್ತು ಚಂದ್ರಶೇಖರ್‍ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‍’ ಚಿತ್ರಕ್ಕೆ 70ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಇದೀಗ ಮುಕ್ತಾಯವಾಗಿದೆ. ಈ ವಿಷಯವನ್ನು ತಿಳಿಸಲು ಅದೇ ದೇವಸ್ಥಾನದಲ್‍ಲಿ ಚಿತ್ರತಂಡದವರು ಸೇರಿದ್ದರು. ಈ ಸಂದರ್ಭದಲ್ಲಿ ಪೃಥ್ವಿ ಅಂಬಾರ್‍, ಧನ್ಯಾ ರಾಮ್‍ಕುಮಾರ್‍, ಸಾಯಿಕುಮಾರ್‍, ಶ್ವೇತಾ ಮುಂತಾದವರು ಹಾಜರಿದ್ದರು. ’ಚೌಕಿದಾರ್’ ಚಿತ್ರಕ್ಕೆ ಸಚಿನ್‍ ಬಸ್ರೂರು ಸಂಗೀತ ಮತ್ತು ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ.

ನಿರ್ದೇಶಕ‌ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ‘ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಮೇ ಆಸುಪಾಸಿನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.

‘ಚೌಕಿದಾರ’ ಎಂದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಮಾತುಗಳು ನೆನಪಾಗುತ್ತದೆ. ಅವರು ತಾನು ಈ ದೇಶದ ಚೌಕಿದಾರ ಎಂದು ಕೆಲವು ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ಈ ಚೌಕಿದಾರ ದೇಶಕಾ? ರಾಜ್ಯಕ್ಕಾ? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಕುರಿತು ಮಾತನಾಡುವ ಅವರು, ‘ಪ್ರತಿಯೊಂದು ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ. ಅವರ ಕಥೆಯನ್ನು ನಾವು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ಸಾಯಿಕುಮಾರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *