Lakshmiputra; ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’; ಎ.ಪಿ. ಅರ್ಜುನ್ ನಿರ್ಮಾಣದಲ್ಲಿ ಹೊಸ ಚಿತ್ರ

ನಿರ್ದೇಶಕ ಎ.ಪಿ. ಅರ್ಜುನ್‍ಗೆ (A P Arjun) ನಿರ್ಮಾಣ ಹೊಸದೇನಲ್ಲ. ಅವರು ‘ಕಿಸ್’ ಚಿತ್ರವನ್ನು ತಮ್ಮ ಎ.ಪಿ. ಅರ್ಜುನ್ ಫಿಲಂಸ್ ಸಂಸ್ಥೆಯ ಮೂಲಕ ನಿರ್ಮಿಸಿದ್ದರು. ಅದರ ನಂತರ ವಿರಾಟ್ ಅಭಿನಯದಲ್ಲಿ ‘ಅದ್ಧೂರಿ ಲವ್ವರ್’ ಎಂಬ ಚಿತ್ರವನ್ನು ಘೋಷಿಸಿದ್ದರು. ಆ ಚಿತ್ರ ಸದ್ಯಕ್ಕೆ ಅರ್ಧಕ್ಕೆ ನಿಂತಿದೆ ಎಂದು ಹೇಳಲಾಗಿದ್ದು, ಅದು ಮುಗಿಯುವುದಕ್ಕೂ ಮೊದಲೇ ಅರ್ಜುನ್ ಹೊಸ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಈ ಬಾರಿ ಅವರು ಚಿಕ್ಕಣ್ಣ (Chikkanna) ಅಭಿನಯದಲ್ಲಿ ‘ಲಕ್ಷ್ಮೀಪುತ್ರ’ (Lakshmiputra) ಎಂಬ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದಲ್ಲಿ ನಾಯಕರಾಗಿದ್ದರು ಚಿಕ್ಕಣ್ಣ. ನಂತರ ಅವರು ಯಾವೊಂದು ಚಿತ್ರದಲ್ಲೂ ನಾಯಕನಾಗಿ ನಟಿಸಿರಲಿಲ್ಲ. ಹೀಗಿರುವಾಗಲೇ, ಅವರು ‘ಲಕ್ಷ್ಮೀ ಪುತ್ರ’ನಾಗಿ ವಾಪಸ್ಸು ಬರುತ್ತಿದ್ದಾರೆ.
‘ಲಕ್ಷ್ಮೀಪುತ್ರ’ ಚಿತ್ರದ ಮುಹೂರ್ತ ಜನವರಿ 24ರಂದು ನಡೆಯಲಿದೆ. ಈ ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಈ ಹಿಂದೆ, ಅರ್ಜುನ್ ಚಿತ್ರಗಳಿಗೆ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಜಯ್‍ಗೆ ನಿರ್ದೇಶಕರಾಗಿ ಇದು ಮೊದಲ ಪ್ರಯತ್ನ.
ಈ ಚಿತ್ರವನ್ನು ಅರ್ಜುನ್ ಅವರ ಪತ್ನಿ ಅನ್ನಪೂರ್ಣ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್, ‘ಲಕ್ಷ್ಮೀಪುತ್ರ’ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.
ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಚಿಕ್ಕಣ್ಣ ಇದ್ದಾರೆ ಎಂದಮೇಲೆ ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿರಲಿದೆ. ಈ ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ, ಚಿಕ್ಕಣ್ಣಗೆ ನಾಯಕಿ ಯಾರಾಗಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
(Martin Director A P Arjun Announce New Film Lakshmiputra with Kannada Comedy Actor Chikkanna)