Biographical tribute to Appu; ಶೀಘ್ರದಲ್ಲೇ ಬರಲಿದೆ ಅಪ್ಪು ʻಜೀವನಚರಿತ್ರೆʼ

1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದ ಲೋಹಿತ್, ಮುಂದೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆಯುತ್ತಾರೆ. ಬಾಲ ನಟನಾಗಿ 14 ಚಿತ್ರಗಳಲ್ಲಿ ನಟಿಸಿದ ಲೋಹಿತ್, ಮುಂದೆ ಪುನೀತ್ ರಾಜ್ಕುಮಾರ್ ಆಗಿ ಅಭಿಮಾನಿಗಳ ಪ್ರೀತಿಯ ಅಪ್ಪುವಾಗಿ ಕರುನಾಡಿಗೆ ಅರ್ಪಿತರಾದರು. ಪುನೀತ್ ಅವರ 50ನೇ ಜನ್ಮದಿನದ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರ ಜೀವನ ಚರಿತ್ರೆಯ ಕುರಿತ ಪುಸ್ತಕ (Biographical tribute to Appu) ಬರಲಿದೆ ಎಂಬ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಲ ನಟನೆಗೇ ರಾಷ್ಟ್ರ ಪ್ರಶಸ್ತಿ ಪಡೆದವರು ಪುನೀತ್ ರಾಜ್ಕುಮಾರ್. ಅಪ್ಪು ಎಂಬ ಸಿನಿಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. 2002ರಲ್ಲಿ ಬಿಡುಗಡೆ ಆದ ಈ ಚಿತ್ರ ಶತದಿನೋತ್ಸವ ಆಚರಿಸಿತು, ಪುನೀತ್ ಅಪ್ಪುವಾಗಿ ಅಭಿಮಾನಿಗಳ ಬಾಯಲ್ಲಿ ಉಳಿದರು. ಪವರ್ ಸ್ಟಾರ್ ಅತಿ ಕಡಿಮೆ ಅವಧಿಯಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದರು. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಆದರೆ 2021ರಲ್ಲಿ ಅವರ ಅಕಾಲಿಕ ನಿಧನದಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು.
ಅಪ್ಪು ಜೀವನಚರಿತ್ರೆ ಪುಸ್ತಕದ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು, ”ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ” ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ಎಂದು ಬರೆದುಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಪ್ರಕೃತಿ ಎನ್ ಬನವಾಸಿ ಈ ಬಯೋಪಿಕ್ನ ಲೇಖಕರು. ಈ ಕೃತಿ ಪುಟದ ಜೊತೆ ಅಪ್ಪು ಪುತ್ರಿಯರೂ ಕಾಣಿಸಿಕೊಂಡಿದ್ದಾರೆ.

