The Devil Teaser: ದರ್ಶನ್‍ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ಡೆವಿಲ್’ ಚಿತ್ರದ ಟೀಸರ್

ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್‍ ಮೊದಲೇ ಹೇಳಿದ್ದರು. ಅದರ ಬದಲು ‘ದಿ ಡೆವಿಲ್‍’ ಚಿತ್ರದ ಟೀಸರ್‍ ಬಿಡುಗಡೆ ಆಗಲಿದೆ ಎಂದಿದ್ದರು. ಅದಕ್ಕೆ ಸರಿಯಾಗಿ ಭಾನುವಾರ (ಫೆ. 16), ‘ಡೆವಿಲ್‍’ ಟೀಸರ್ ಬಿಡುಗಡೆಯಾಗಿದೆ.

ಒಂದು ನಿಮಿಷ ನಾಲ್ಕು ಸೆಕೆಂಡ್‍ಗಳ ಅವಧಿಯ ಈ ಟೀಸರ್‍ನಲ್ಲಿ ಕ್ಲಬ್‍ವೊಂದರಲ್ಲಿ ದರ್ಶನ್‍ ಹೊಡೆದಾಡುವ ಒಂದಿಷ್ಟು ದೃಶ್ಯಗಳಿವೆ. ತಮ್ಮ ತಂಟೆಗೆ ಬರುವ ಒಂದಿಷ್ಟು ಜನರನ್ನು ತದಕುವ ದರ್ಶನ್, ಕೊನೆಯಲ್ಲಿ ‘ಚಾಲೆಂಜ್‍ ನನಗಾ?’ ಎಂದು ಸಂಭಾಷಣೆ ಹೇಳುವ ಮೂಲಕ ಮುಗಿಯುತ್ತದೆ.

ಕಳೆದ ವರ್ಷ ಪ್ರಾರಂಭವಾದ ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ದರ್ಶನ್‍ ತಮ್ಮ ಭಾಗದ ಒಂದಿಷ್ಟು ಚಿತ್ರೀಕರಣ ಮಾಡಿದ್ದರು. ಬಂಧನಕ್ಕೊಳಗಾದ ನಂತರ ಚಿತ್ರದ ಕಥೆಯೇನು? ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿತ್ತು. ಕಳೆದ ವರ್ಷದ ಕ್ರಿಸ್ಮಸ್‍ ವೇಳೆಗೆ ಚಿತ್ರ ಬಿಡುಗಡೆ ಎಂದು ಚಿತ್ರತಂಡ ಎಂದು ಮೊದಲೇ ಘೋಷಿಸಿದ್ದರಿಂದ, ಅಷ್ಟರಲ್ಲಿ ಚಿತ್ರ ಬಿಡುಗಡೆ ಆಗುತ್ತದಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.

ಆದರೆ, ದರ್ಶನ್‍ ಜಾಮೀನಿನ ಮೇಲೆ ಹೊರಬಂದಿದ್ದೇ ನವೆಂಬರ್‍ ತಿಂಗಳಿನಲ್ಲಾದ್ದರಿಂದ ಚಿತ್ರೀಕರಣ ಅಂದುಕೊಂಡಂತೆ ಮುಗಿದು, ಬಿಡುಗಡೆ ಆಗಲಿಲ್ಲ. ದರ್ಶನ್‍ ಸದ್ಯ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ ಸದ್ಯ ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಯಾವಾಗಿನಿಂದ ಚಿತ್ರೀಕರಣ ಪ್ರಾರಂಭ ಎಂಬುದರ ನಿಖರವಾದ ಮಾಹಿತಿ ಇಲ್ಲ. ಈ ಮಧ್ಯೆ, ದರ್ಶನ್‍ ಹುಟ್ಟುಹಬ್ಬದ ಕಾರಣ, ಭಾನುವಾರ ಟೀಸರ್‍ ಬಿಡುಗಡೆ ಮಾಡಲಾಗಿದೆ.

‘ದಿ ಡೆವಿಲ್‍’ ಚಿತ್ರವನ್ನು ‘ಮಿಲನ’ ಪ್ರಕಾಶ್‍ ನಿರ್ದೇಶಿಸುತ್ತಿದ್ದು, ಶ್ರೀ ಜೈಮಾತಾ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್‍ ಮೂಲಕ ಅವರ ತಾಯಿ ಜಯಮ್ಮ ನಿರ್ಮಣ ಮಾಡುತ್ತಿದ್ದಾರೆ. ದರ್ಶನ್‍ ಎದುರು ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದು, ಮಹೇಶ್‍ ಮಂಜ್ರೇಕರ್‍ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸುಧಾಕರ್‍ ರಾಜ್‍ ಛಾಯಾಗ್ರಹಣ ಮತ್ತು ಅಜನೀಶ್‍ ಲೋಕನಾಥ್‍ ಅವರ ಸಂಗೀತವಿದೆ.

Leave a Reply

Your email address will not be published. Required fields are marked *