Tayi Kastur Gandhi; ಮಾರ್ಚ್‌ 28ಕ್ಕೆ ಅಮೇಜಾನ್‍ ಪ್ರೈಮ್‍ನಲ್ಲಿ ‘ತಾಯಿ ಕಸ್ತೂರ್ ಗಾಂಧಿ’

‘ಭಾಗೀರತಿ’ವರೆಗೂ ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶನದ ಚಿತ್ರಗಳು ತಪ್ಪದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಅದು ಸಾಧ್ಯವಾಗದಿದ್ದರೂ, ಅವರು ‘ಸಮುದಾಯದತ್ತ ಸಿನಿಮಾ’ ಎಂಬ ಕಾರ್ಯಕ್ರಮದಡಿ ಕರ್ನಾಟಕದ ಬೇರೆಬೇರೆ ಊರುಗಳಿಗೆ ಹೋಗಿ, ತಮ್ಮ ಚಿತ್ರಗಳನ್ನು ತೋರಿಸಿ, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಚಿತ್ರಗಳು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದು ಬಿಟ್ಟರೆ, ಮಿಕ್ಕಂತೆ ಬಿಡುಗಡೆಯಾಗಿರಲಿಲ್ಲ.

ಇದೀಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಮತ್ತು ಜನಮಿತ್ರ ಮೂವೀಸ್ ನಿರ್ಮಾಣದ ‘ತಾಯಿ ಕಸ್ತೂರ್ ಗಾಂಧಿ’ (Tayi Kastur Gandhi) ಚಿತ್ರವು ಇದೇ ಮಾರ್ಚ್ 28ರಂದು ಅಮೇಜಾನ್ ಪ್ರೈಮ್‍ನಲ್ಲಿ (Amazon Prime) ಬಿಡುಗಡೆಯಾಗಲಿದೆ. ಓಟಿಟಿಯಲ್ಲಿ ಪ್ರದರ್ಶನವಾಗುತ್ತಿರುವ ಬರಗೂರರ ಮೊದಲ ಚಿತ್ರ ಇದಾಗಿದೆ.

ಈ ಚಿತ್ರವು ಅವರದೇ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ. ಈ ಹಿಂದೆ ಅಂಬೇಡ್ಕರ್‌ ಅವರ ಪತ್ನಿ ರಮಾ ಬಾಯಿ ಅವರ ಜೀವನವನ್ನಾಧರಿಸಿ ಚಿತ್ರಗಳಾಗಿವೆ. ಕನ್ನಡದಲ್ಲಿ ‘ರಮಾಬಾಯಿ’ ಎಂಬ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ, ಕಸ್ತೂರ್‍ ಬಾ ಗಾಂಧಿ ಅವರನ್ನು ಕೇಂದ್ರವಾಗಿಟ್ಟುಕೊಂಡು ಯಾವ ಚಿತ್ರ ನಿರ್ಮಾಣವಾಗಿರಲಿಲ್ಲ. ಈಗ ‘ತಾಯಿ ಕಸ್ತೂರ್‍’, ಕಸ್ತೂರ್‍ ಬಾ ಗಾಂಧಿ ಅವರ ಕುರಿತು ನಿರ್ಮಾಣವಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಸ್ತೂರ್ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳ ಮೂಲಕ ಆದರ್ಶ ಮತ್ತು ಕಟುವಾಸ್ತವಗಳ ಕಥನವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಬದುಕಿನ ದ್ವಂದ್ವಗಳನ್ನು ಎದುರಿಸುತ್ತಲೇ ಅದನ್ನು ಮೀರುವ ವ್ಯಕ್ತಿತ್ವಗಳಾಗಿ ಕಸ್ತೂರ್ ಬಾ ಮತ್ತು ಗಾಂಧಿಜಿಯವರನ್ನು ಚಿತ್ರಿಸಲಾಗಿದೆ. ಕಸ್ತೂರ್ ಬಾ ಅವರು ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಬದುಕನ್ನು ನಿಭಾಯಿಸಿದ ಚರಿತೆಯನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಇದು ಏಕಕಾಲಕ್ಕೆ ಕಸ್ತೂರ್ ಬಾ ಮತ್ತು ಗಾಂಧಿಜಿ ಇಬ್ಬರ ವ್ಯಕ್ತಿತ್ವವನ್ನು ಒಳಗೊಂಡ ಚಿತ್ರವಾಗಿದೆ.

‘ತಾಯಿ ಕಸ್ತೂರ್ ಗಾಂಧಿ’ ಚಿತ್ರವು ಕೆಲವು ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗಾಗಿದ್ದು, ಲಾಸ್ ಏಂಜಲೀಸ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಸುರೇಶ್ ಅರಸು ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿಯೂ ಬಂದಿದೆ.

ಕಸ್ತೂರ್ ಬಾ ಮತ್ತು ಗಾಂಧಿಜಿಯವರ ಬಾಲ್ಯ, ಯೌವನ ಮತ್ತು ಮುಪ್ಪಿನ ಹಂತಗಳು ಈ ಚಿತ್ರದಲ್ಲಿವೆ. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಮತ್ತು ಗಾಂಧಿಯಾಗಿ ಕಿಶೋರ್ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಮಾಸ್ಟರ್ ಆಕಾಂಕ್ಷ್ ಬರಗೂರು, ಸುಂದರ್‍ ರಾಜ್‍, ಪ್ರಮೀಳಾ ಜೋಷಾಯ್, ರಾಘವ್, ಸುಂದರರಾಜ್‍ ಅರಸು, ರೇಖಾ, ವೆಂಕಟರಾಜು, ವತ್ಸಲಾ ಮೋಹನ್, ಕುಮಾರಿ ಸ್ಪಂದನ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ತಾಯಿ ಕಸ್ತೂರ್ ಗಾಂಧಿ’ ಚಿತ್ರಕ್ಕೆ ಸುರೇಶ್ ಅರಸ್‍ ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತವಿದೆ. ಬರಗೂರರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.

One thought on “Tayi Kastur Gandhi; ಮಾರ್ಚ್‌ 28ಕ್ಕೆ ಅಮೇಜಾನ್‍ ಪ್ರೈಮ್‍ನಲ್ಲಿ ‘ತಾಯಿ ಕಸ್ತೂರ್ ಗಾಂಧಿ’

Leave a Reply

Your email address will not be published. Required fields are marked *